
ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ (E20) ಬಳಸಿದರೆ ವಾಹನದ ಎಂಜಿನ್ ಹಾಳಾಗುತ್ತದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇಂತಹ ಆತಂಕಗಳಿಗೆ ಯಾವುದೇ ಆಧಾರವಿಲ್ಲ ಎಂದು ಕೇಂದ್ರ ಇಂಧನ ಇಲಾಖೆ ತಿಳಿಸಿದೆ.
ಸಚಿವಾಲಯದ ಪ್ರಕಾರ, ಎಥನಾಲ್ ಮಿಶ್ರಿತ ಇಂಧನವು ವಾಹನಗಳ ಎಂಜಿನ್‌ಗೆ ಹಾನಿ ಉಂಟುಮಾಡುವುದಿಲ್ಲ. ಈ ಕುರಿತು ಗ್ರಾಹಕರಲ್ಲಿ ಮೂಡಿರುವ ಅನುಮಾನಗಳನ್ನು ದೇಶದ ತೈಲ ಕಂಪನಿಗಳು ಹಾಗೂ ತಾಂತ್ರಿಕ ಪಾಲುದಾರರೂ ತಳ್ಳಿಹಾಕಿದ್ದಾರೆ ಎಂದು ಇಲಾಖೆ ಹೇಳಿದೆ.
ಎಥನಾಲ್ ಮಿಶ್ರಿತ ಇಂಧನ ಬಳಕೆಯಿಂದ ದೇಶದ ಇಂಧನ ಆಮದು ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಲಾಭವೂ ದೊರೆಯುತ್ತಿದೆ. ಇದುವರೆಗೆ ಎಥನಾಲ್ ಮಿಶ್ರಣದಿಂದ ತೈಲ ಆಮದು ವೆಚ್ಚದಲ್ಲಿ ಸುಮಾರು ₹1.4 ಲಕ್ಷ ಕೋಟಿ ಉಳಿತಾಯವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಅಮೆರಿಕ, ಬ್ರೆಜಿಲ್ ಮತ್ತು ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎಥನಾಲ್ ಮಿಶ್ರಿತ ಇಂಧನವನ್ನು ಹಲವು ವರ್ಷಗಳಿಂದ ಯಶಸ್ವಿಯಾಗಿ ಬಳಸಲಾಗುತ್ತಿದೆ. ಭಾರತದಲ್ಲಿಯೂ ಇದೇ ಮಾದರಿಯನ್ನು ಉತ್ತೇಜಿಸುವ ಮೂಲಕ ಇಂಧನ ಸ್ವಾವಲಂಬನೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಎಥನಾಲ್ ಬಳಕೆ ಕೇವಲ ಆರ್ಥಿಕ ಲಾಭಕ್ಕೆ ಮಾತ್ರ ಸೀಮಿತವಲ್ಲ. ವಾಯುಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ಸಾರಿಗೆ ವ್ಯವಸ್ಥೆಗೆ ಇದು ನೆರವಾಗಲಿದೆ ಎಂದು ಕೇಂದ್ರ ಇಂಧನ ಇಲಾಖೆ ತಿಳಿಸಿದೆ. ಆದ್ದರಿಂದ ಎಂಜಿನ್ ಹಾಳಾಗುತ್ತದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು ಎಂದು ಸರ್ಕಾರ ಮನವಿ ಮಾಡಿದೆ.



