ಸಸ್ಯಾಹಾರಿ ನಗರವಾಗಲಿದೆ ವಾರಾಣಸಿ, ಮಹತ್ವದ ತೀರ್ಮಾನ! ಮಾಂಸ ಅಂಗಡಿಗಳಿಗೆ ಬ್ರೇಕ್

ವಾರಾಣಸಿ ಮಹಾನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿರುವ ಮಾಂಸ ಮೀನು ಮತ್ತು ಕೋಳಿ ಅಂಗಡಿಗಳನ್ನು ಆರು ತಿಂಗಳಲ್ಲಿ ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದು ಸಸ್ಯಾಹಾರಿ ನಗರ ರೂಪಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ಉತ್ತರ ಪ್ರದೇಶದ ಪವಿತ್ರ ನಗರ ವಾರಾಣಸಿಯನ್ನು ಸಸ್ಯಾಹಾರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರ ವ್ಯಾಪ್ತಿಯಲ್ಲಿರುವ ಮಾಂಸ, ಮೀನು ಹಾಗೂ ಕೋಳಿ ಮಾರಾಟದ ಅಂಗಡಿಗಳನ್ನು ಹಂತ ಹಂತವಾಗಿ ಹೊರವಲಯಕ್ಕೆ ಸ್ಥಳಾಂತರಿಸಲು ಯೋಜನೆ ಸಿದ್ಧಪಡಿಸಲಾಗಿದೆ.

ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 350 ರಿಂದ 400 ಮಾಂಸ ಮಾರಾಟದ ಅಂಗಡಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ದೀಪಾವಳಿಗೂ ಮುನ್ನ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಪಾಲಿಕೆ ಹೊಂದಿದೆ.

ಅಂಗಡಿಗಳನ್ನು ರಾಮನಗರ, ಸುಜಾಬಾದ್, ಗಣೇಶಪುರ, ಅವಲೇಶ್ ನಗರ ಮತ್ತು ಶಿವಪುರ ಪ್ರದೇಶಗಳಿಗೆ ಸ್ಥಳಾಂತರಿಸುವ ಪ್ರಸ್ತಾವನೆ ಇದೆ. ಈ ಕ್ರಮದಿಂದ ನಗರದ ಪ್ರಮುಖ ಭಾಗಗಳಲ್ಲಿ ಮಾಂಸ ಮಾರಾಟ ನಡೆಯದಂತೆ ಮಾಡುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆ ಯಶಸ್ವಿಯಾಗಿ ಜಾರಿಯಾದರೆ ವಾರಾಣಸಿ ದೇಶದ ಪ್ರಮುಖ ಸಸ್ಯಾಹಾರಿ ನಗರಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲಿದೆ. ಪ್ರಸ್ತುತ ಗುಜರಾತಿನ ಪಾಲಿತಾನಾ ನಗರವು ಸಂಪೂರ್ಣ ಸಸ್ಯಾಹಾರಿ ಪಟ್ಟಣವೆಂದು ಪ್ರಸಿದ್ಧಿಯಾಗಿದ್ದು, ಅಲ್ಲಿ 2014ರಿಂದ ಮಾಂಸ, ಮೀನು ಮತ್ತು ಮೊಟ್ಟೆ ಮಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದೆ.

ವಾರಾಣಸಿ ಮಹಾನಗರ ಪಾಲಿಕೆಯ ಈ ನಿರ್ಧಾರವು ನಗರಾಭಿವೃದ್ಧಿ, ಧಾರ್ಮಿಕ ಭಾವನೆಗಳು ಹಾಗೂ ಸ್ಥಳೀಯ ವ್ಯಾಪಾರ ಚಟುವಟಿಕೆಗಳ ದೃಷ್ಟಿಯಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಅನುಷ್ಠಾನದತ್ತ ಎಲ್ಲರ ಗಮನ ನೆಟ್ಟಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories