
ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್‌ಧನ್ (PM-SYM) ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಮಹತ್ವದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಅಲ್ಪ ಮೊತ್ತದ ಮಾಸಿಕ ಪಾವತಿಯಿಂದ 60 ವರ್ಷಗಳ ನಂತರ ಖಚಿತ ಮಾಸಿಕ ಪಿಂಚಣಿ ಪಡೆಯುವ ಅವಕಾಶ ಈ ಯೋಜನೆಯಲ್ಲಿ ಲಭ್ಯವಿದೆ.
ಈ ಯೋಜನೆಯ ವಿಶೇಷತೆ ಎಂದರೆ, ಫಲಾನುಭವಿ ಎಷ್ಟು ಮೊತ್ತವನ್ನು ಮಾಸಿಕವಾಗಿ ಜಮೆ ಮಾಡುತ್ತಾರೋ ಅಷ್ಟೇ ಮೊತ್ತವನ್ನು ಕೇಂದ್ರ ಸರ್ಕಾರವೂ ತನ್ನ ಪಾಲಾಗಿ ಜಮೆ ಮಾಡುತ್ತದೆ. 18ನೇ ವಯಸ್ಸಿನಲ್ಲಿ ಯೋಜನೆಗೆ ಸೇರುವವರು ತಿಂಗಳಿಗೆ ಕೇವಲ ₹55 ಪಾವತಿಸಿದರೆ ಸಾಕು. 40ನೇ ವಯಸ್ಸಿನಲ್ಲಿ ಸೇರುವವರು ತಿಂಗಳಿಗೆ ₹200ವರೆಗೆ ಪಾವತಿಸಬೇಕಾಗುತ್ತದೆ.
60 ವರ್ಷ ಪೂರೈಸಿದ ನಂತರ ಯೋಜನೆಯ ಸದಸ್ಯರಿಗೆ ಪ್ರತಿ ತಿಂಗಳು ಕನಿಷ್ಠ ₹3,000 ಪಿಂಚಣಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಯೋಜನೆಯ ಸದಸ್ಯರು ಮೃತಪಟ್ಟರೆ, ಅವರ ಸಂಗಾತಿಗೆ ಯೋಜನೆ ಮುಂದುವರಿಸುವ ಅವಕಾಶವಿದ್ದು, ಪಿಂಚಣಿ ಆರಂಭವಾದ ಬಳಿಕ ಸದಸ್ಯರ ಮರಣ ಸಂಭವಿಸಿದರೆ ಕುಟುಂಬ ಪಿಂಚಣಿಯ ಶೇಕಡಾ 50ರಷ್ಟು ಮೊತ್ತವನ್ನು ಪಡೆಯಬಹುದು.
ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರ ವಯಸ್ಸು 18 ರಿಂದ 40 ವರ್ಷಗಳೊಳಗೆ ಇರಬೇಕು. ಮಾಸಿಕ ಆದಾಯ ₹15,000 ಮೀರಿರಬಾರದು. ಬೀದಿ ವ್ಯಾಪಾರಿಗಳು, ಆಟೋ ಮತ್ತು ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಗೃಹ ಕಾರ್ಮಿಕರು, ರೈತ ಕಾರ್ಮಿಕರು, ದರ್ಜಿಗಳು, ಪ್ಲಂಬರ್‌ಗಳು ಸೇರಿದಂತೆ ಅಸಂಘಟಿತ ವಲಯದ ಹಲವು ವರ್ಗದ ಕಾರ್ಮಿಕರು ಯೋಜನೆಗೆ ಅರ್ಹರಾಗಿದ್ದಾರೆ.
ಆದರೆ EPFO, ESIC ಅಥವಾ NPS ಮೊದಲಾದ ಕಾನೂನುಬದ್ಧ ಸಾಮಾಜಿಕ ಭದ್ರತಾ ಯೋಜನೆಗಳ ಸದಸ್ಯರು ಹಾಗೂ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಭವಿಷ್ಯದಲ್ಲಿ ಸ್ಥಿರ ಆದಾಯದ ವ್ಯವಸ್ಥೆ ಇಲ್ಲದ ಲಕ್ಷಾಂತರ ಕಾರ್ಮಿಕರಿಗೆ ಈ ಯೋಜನೆ ಆರ್ಥಿಕ ಭದ್ರತೆಯ ಆಧಾರವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.



