
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಎನ್ನಲಾದ ಫೋರ್ಡ್ ಎಂಡೋವರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕಾರು ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಹೊಡೆತಕ್ಕೆ ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಘಟನೆಗೆ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ.
ಅಪಘಾತದ ಬಳಿಕ ಸ್ಥಳೀಯರು ಕಾರನ್ನು ತಡೆದು ನಿಲ್ಲಿಸಿದ್ದು, ಘಟನಾ ಸ್ಥಳದಲ್ಲೇ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಕಾರಿನಲ್ಲಿ ಇದ್ದ ವಿನೀಶ್ ಅವರನ್ನು ಸಾರ್ವಜನಿಕರು ಪ್ರಶ್ನಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಅಪಘಾತ ಸಂಭವಿಸಿದ ವೇಳೆ ವಿನೀಶ್ ಕಾರು ಚಾಲನೆ ಮಾಡುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೈಕ್ ಸವಾರನಿಗೆ ಅಗತ್ಯ ನೆರವು ನೀಡಲು ವಿನೀಶ್ ಮುಂದಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ನಮ್ಮ ಕುಟುಂಬ ಈಗಾಗಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪರಿಶೀಲಿಸದ ಮಾಹಿತಿಯನ್ನು ಹರಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ.



