ಎಲೆಕ್ಟ್ರಿಕ್ ಸ್ಕೂಟರ್ಗಳು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ದಿನಗಳಲ್ಲಿ ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟಮಾಡಿ ಗ್ರಾಹಕರ ಮನ ಗೆಲ್ಲುತ್ತಿವೆ. ಅವುಗಳಲ್ಲಿ ಈಗ ಎಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ಗಳೂ ಒಂದು. ಸದ್ಯ ಇದು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ವಿಭಾಗದಲ್ಲಿ ಹೇಳಿಕೊಳ್ಳಬಹುದಾದ ಸಾಧನೆ ಮಾಡಿದೆ. ಅದೇನೆಂದರೆ ಕಂಪನಿಯು 4 ಲಕ್ಷ ಸ್ಕೂಟರ್ಗಳನ್ನು ತಯಾರಿಸಿ ಮಾರಾಟ ಮಾಡುವ ಮೈಲಿಗಲ್ಲನ್ನು ಸಾಧಿಸಿ ತೋರಿಸಿದೆ. ಇದು ಕೇವಲ ಮಾರಾಟವಷ್ಟೇ ಅಲ್ಲದೇ ಗ್ರಾಹಕ ವಿಶ್ವಾಸವನ್ನು ಗಳಿಸಿದೆ. ಎಂಪಿಯರ್ನ ಮ್ಯಾಗ್ನಸ್, ನೆಕ್ಸಸ್ ಹಾಗೂ ರಿಯೊ ಮಾದರಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ, ಟಿವಿಎಸ್, ಬಜಾಜ್, ಅಥರ್ ಎನರ್ಜಿ, ಹೀರೋ ವಿಡಾ ಮತ್ತು ಓಲಾ ಎಲೆಕ್ಟ್ರಿಕ್ಗೆ ಠಕ್ಕರ್ ಕೊಡುವ ಈ ಸ್ಕೂಟರ್ ಕೈಗೆಟುಕುವ ಬೆಲೆ, ಶಕ್ತಿ, ಉತ್ತಮ ವಿನ್ಯಾಸ ಮತ್ತು ಪ್ರಾಯೋಗಿಕತೆ ಹಾಗೂ ಉತ್ತಮ ಶ್ರೇಣಿಗೆ ಹೆಸರುವಾಸಿಯಾಗಿದೆ.
ಎಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಸಾಧನೆ ಏನು?
ಎಂಪಿಯರ್ ವರ್ಷದಿಂದ ವರ್ಷಕ್ಕೆ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. FY2026 ರಲ್ಲಿ 51% ರಷ್ಟು ಹೆಚ್ಚು ಬೆಳವಣಿಗೆಯನ್ನು ಸಾಧಿಸಿದೆ. Y2025 ರಲ್ಲಿ ಅದರ ಮಾರುಕಟ್ಟೆ ಪಾಲು 3.6% ರಿಂದ FY2026 ರಲ್ಲಿ 4.4% ಕ್ಕೆ ಏರಿದೆ. ಈ ವರ್ಷ, ಎಂಪಿಯರ್ ಕೂಡ ಒಮ್ಮೆ ಟಾಪ್ 5 ರಲ್ಲಿ ಸ್ಥಾನ ಪಡೆದು, ಓಲಾ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿತು.
ಎಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟಿದೆ?
ಎಂಪಿಯರ್ ರಿಯೊ ರೂ. 59,900 ಎಕ್ಸ್ ಶೋ ರೂಂ ಬೆಲೆಯಿಂದ ಆರಂಭವಾಗುತ್ತದೆ.
ಎಂಪಿಯರ್ ಮ್ಯಾಗ್ನಸ್ ಗ್ರ್ಯಾಂಡ್ ರೂ. 89,999 ಎಕ್ಸ್ ಶೋ ರೂಂ ಬೆಲೆಯಿಂದ ಆರಂಭವಾಗುತ್ತದೆ.
ಎಂಪಿಯರ್ ಮ್ಯಾಗ್ನಸ್ ನಿಯೊ ರೂ. 86,999 ಎಕ್ಸ್ ಶೋ ರೂಂ ಬೆಲೆಯಿಂದ ಆರಂಭವಾಗುತ್ತದೆ.
ಹೊಸ ಎಂಪಿಯರ್ ಮ್ಯಾಗ್ನಸ್ ನಿಯೊ ರೂ. 86,999 ಎಕ್ಸ್ ಶೋ ರೂಂ ಬೆಲೆಯಿಂದ ಆರಂಭವಾಗುತ್ತದೆ.
ಎಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್ ರೂ. 97,999 ಎಕ್ಸ್ ಶೋ ರೂಂ ಬೆಲೆಯಿಂದ ಆರಂಭವಾಗುತ್ತದೆ.
ಎಂಪಿಯರ್ ನೆಕ್ಸಸ್ ರೂ. 1,19,999 ರಿಂದ ಆರಂಭವಾಗುತ್ತದೆ.
ಇದನ್ನೂ ಓದಿ: ಜುಲೈನಲ್ಲಿ ಎರಡು ಹೈಬ್ರಿಡ್ ಎಸ್ಯುವಿ ಎಂಟ್ರಿ; ಖರೀದಿದಾರರಿಗೆ ಹೊಸ ಆಯ್ಕೆ
ಹೇಗಿದೆ ಎಂಪಿಯರ್?
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಸಿಂಗ್ ಹೇಳುವಂತೆ ಈ 4 ಲಕ್ಷ ಸ್ಕೂಟರ್ ಹೆಚ್ಚುತ್ತಿರುವ ಗ್ರಾಹಕರ ವಿಶ್ವಾಸದ ಸಂಕೇತವಾಗಿದೆ. ಎಂಪಿಯರ್ ಸ್ಕೂಟರ್ಗಳು ₹1 ಲಕ್ಷಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಉತ್ತಮ ಸ್ಥಾನದಲ್ಲಿವೆ. ಎಂಪಿಯರ್ ಸ್ಕೂಟರ್ಗಳು 100% LFP ಬ್ಯಾಟರಿ ಪ್ಲಾಟ್ಫಾರ್ಮ್ ಅನ್ನು ಆಧರಿಸಿವೆ. ಇದು ಉತ್ತಮ ಸುರಕ್ಷತೆ, ಉಷ್ಣ ಸ್ಥಿರತೆ ಮತ್ತು ಸುಮಾರು 2,00,000 ಕಿಲೋಮೀಟರ್ಗಳ ದೀರ್ಘ ಜೀವಿತಾವಧಿಯನ್ನು ಖಚಿತಪಡಿಸುತ್ತದೆ. ಎಂಪಿಯರ್ನ ಪೋರ್ಟ್ಫೋಲಿಯೊದಲ್ಲಿ ಹಲವಾರು ಜನಪ್ರಿಯ ಮಾದರಿಗಳು ವರ್ಷದ ಎಲೆಕ್ಟ್ರಿಕ್ ಸ್ಕೂಟರ್ ಪ್ರಶಸ್ತಿಗಳನ್ನು ಪಡೆದಿವೆ.



