
ಕಡಿಮೆ ವೆಚ್ಚದಲ್ಲಿ ಹೆಚ್ಚು ಡೇಟಾ ಹಾಗೂ ಉತ್ತಮ ಪ್ರಯೋಜನಗಳನ್ನು ಹುಡುಕುತ್ತಿರುವ ಮೊಬೈಲ್ ಬಳಕೆದಾರರಿಗೆ BSNL ಹೊಸ ಆಕರ್ಷಕ ಆಯ್ಕೆಯನ್ನು ನೀಡಿದೆ. ಕೇವಲ ₹199 ಬೆಲೆಯ ಈ ಪ್ರಿಪೇಯ್ಡ್ ಪ್ಲಾನ್ ಈಗ ಹಲವು ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳಿಗೆ ಪೈಪೋಟಿ ನೀಡುತ್ತಿದೆ.
ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ದಿನದ ಡೇಟಾ ಮಿತಿ ಮುಗಿದ ಬಳಿಕವೂ ಇಂಟರ್ನೆಟ್ ಸೇವೆ ಮುಂದುವರಿಯುತ್ತದೆ. ಆದರೆ ವೇಗವು 40kbps ಗೆ ಇಳಿಯುತ್ತದೆ. ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕರೆಗಳು ಮಾಡುವ ಅವಕಾಶವೂ ಲಭ್ಯ.
ಡೇಟಾ ಮತ್ತು ಕರೆಗಳ ಜೊತೆಗೆ ಪ್ರತಿದಿನ 100 ಉಚಿತ SMS ಕಳುಹಿಸುವ ಸೌಲಭ್ಯವೂ ಈ ಯೋಜನೆಯಲ್ಲಿ ಸೇರಿದೆ. ಈ ಎಲ್ಲಾ ಪ್ರಯೋಜನಗಳನ್ನು 28 ದಿನಗಳ ವ್ಯಾಲಿಡಿಟಿ ಅವಧಿಗೆ BSNL ಒದಗಿಸುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರಗಳನ್ನು ಹೆಚ್ಚಿಸಿರುವ ಸಂದರ್ಭದಲ್ಲಿ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ BSNL ಗ್ರಾಹಕರ ಗಮನ ಸೆಳೆಯುತ್ತಿದೆ. ದೇಶದಾದ್ಯಂತ 4G ಸೇವೆಯನ್ನು ವಿಸ್ತರಿಸುತ್ತಿರುವ ಸಂಸ್ಥೆ, 5G ಸೇವೆ ಆರಂಭಿಸಲು ಕೂಡ ವೇಗವಾಗಿ ಸಿದ್ಧತೆ ನಡೆಸುತ್ತಿದೆ.
ಬೆಲೆ ಹೋಲಿಕೆ ಮಾಡಿದರೆ, ಜಿಯೋ ಮತ್ತು ಏರ್‌ಟೆಲ್ ಸುಮಾರು ₹299 ರೀಚಾರ್ಜ್‌ನಲ್ಲಿ 28 ದಿನಗಳಿಗೆ ಪ್ರತಿದಿನ 1.5GB ಡೇಟಾ ನೀಡುತ್ತವೆ. ಇನ್ನೊಂದೆಡೆ Vi ಪ್ರತಿದಿನ 2GB ಡೇಟಾ ನೀಡುವ ಯೋಜನೆಗೆ ಸುಮಾರು ₹408 ವಸೂಲಿ ಮಾಡುತ್ತದೆ. ಆದರೆ BSNL ಇದೇ ರೀತಿಯ ಹೆಚ್ಚಿನ ಡೇಟಾ ಸೌಲಭ್ಯವನ್ನು ಕೇವಲ ₹199 ಕ್ಕೆ ನೀಡುತ್ತಿರುವುದರಿಂದ, ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.



