ವಾಟ್ಸಾಪ್‌ನಲ್ಲಿ ಹೊಸ ಭದ್ರತಾ ಫೀಚರ್; ಅಪರಿಚಿತ ನಂಬರ್‌ಗಳ ಮೋಸಕ್ಕೆ ಬ್ರೇಕ್!

ವಾಟ್ಸಾಪ್ ಹೊಸ ಭದ್ರತಾ ಫೀಚರ್ ಪರಿಚಯಿಸಿದ್ದು, ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಾಗ ಚಾಟ್ ತೆರೆಯುವ ಮೊದಲು ಅಗತ್ಯ ಮಾಹಿತಿ ಹಾಗೂ ಎಚ್ಚರಿಕೆ ತೋರಿಸಿ ಬಳಕೆದಾರರು ಸುರಕ್ಷಿತ ನಿರ್ಧಾರ ತೆಗೆದುಕೊಳ್ಳಲು ನೆರವಾಗಲಿದೆ.

ಆನ್‌ಲೈನ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಬಳಕೆದಾರರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ವಾಟ್ಸಾಪ್ ಹೊಸ ಭದ್ರತಾ ಫೀಚರ್ ಪರಿಚಯಿಸಿದೆ. ಇನ್ನು ಮುಂದೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದರೆ, ಚಾಟ್ ತೆರೆಯುವ ಮುನ್ನವೇ ಆ ಸಂಖ್ಯೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಬಳಕೆದಾರರಿಗೆ ತೋರಿಸಲಾಗುತ್ತದೆ.

ಈ ಹೊಸ ವ್ಯವಸ್ಥೆಯು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗುತ್ತಿದೆ. ನೀವು ಇದುವರೆಗೆ ಸಂಪರ್ಕಿಸದ ಸಂಖ್ಯೆಯಿಂದ ಮೊದಲ ಬಾರಿಗೆ ಸಂದೇಶ ಬಂದರೆ, ಆ ಸಂಖ್ಯೆ ಯಾವ ದೇಶಕ್ಕೆ ಸೇರಿದೆ, ಅದು ನಿಮ್ಮ ಸಂಪರ್ಕ ಪಟ್ಟಿಯಲ್ಲಿದೆಯೇ, ಯಾವುದೇ ಸಾಮಾನ್ಯ ಗುಂಪು (ಕಾಮನ್ ಗ್ರೂಪ್) ಇದೆಯೇ ಎಂಬ ಮಾಹಿತಿಯನ್ನು ವಾಟ್ಸಾಪ್ ಮೊದಲೇ ಪ್ರದರ್ಶಿಸುತ್ತದೆ.

ಈ ಮಾಹಿತಿಯ ಆಧಾರದಲ್ಲಿ ಬಳಕೆದಾರರು ಚಾಟ್ ಮುಂದುವರಿಸಬೇಕೇ ಅಥವಾ ನಿರ್ಲಕ್ಷಿಸಬೇಕೇ ಎಂಬುದನ್ನು ಸುಲಭವಾಗಿ ನಿರ್ಧರಿಸಬಹುದು. ಮುಖ್ಯವಾಗಿ, ನೀವು ಚಾಟ್ ತೆರೆಯದಿದ್ದರೂ ಅಥವಾ ರದ್ದುಪಡಿಸಿದರೂ ಅದರ ಬಗ್ಗೆ ಎದುರಿನ ವ್ಯಕ್ತಿಗೆ ಯಾವುದೇ ಮಾಹಿತಿ ಹೋಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ “ಇದು ನನ್ನ ಹೊಸ ನಂಬರ್” ಎಂದು ಪರಿಚಯಿಸಿಕೊಂಡು ವಂಚನೆ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಮೋಸದ ಪ್ರಯತ್ನಗಳಿಂದ ಬಳಕೆದಾರರನ್ನು ರಕ್ಷಿಸಲು ಈ ಫೀಚರ್ ಸಹಕಾರಿಯಾಗಲಿದೆ. ಅಪರಿಚಿತ ದೇಶದ ಸಂಖ್ಯೆಯಿಂದ ಸಂದೇಶ ಬಂದರೆ ಬಳಕೆದಾರರು ಹೆಚ್ಚುವರಿ ಎಚ್ಚರಿಕೆ ವಹಿಸಲು ಇದು ನೆರವಾಗುತ್ತದೆ.

ಆದರೆ ಈ ಫೀಚರ್ ಇದ್ದರೂ ಪ್ರತಿಯೊಂದು ಅಪರಿಚಿತ ಸಂಖ್ಯೆಯೂ ವಂಚನೆಯದ್ದೇ ಎಂದು ಭಾವಿಸುವ ಅಗತ್ಯವಿಲ್ಲ. ನಿಮ್ಮ ಸ್ನೇಹಿತರು ಅಥವಾ ಪರಿಚಿತರು ಹೊಸ ಸಂಖ್ಯೆಯಿಂದ ಸಂಪರ್ಕಿಸಬಹುದು. ಹಾಗೆಯೇ ಈಗಾಗಲೇ ನಿಮ್ಮ ಫೋನ್‌ನಲ್ಲಿ ಸೇವ್ ಆಗಿರುವ ಸಂಖ್ಯೆಗೆ ಈ ಎಚ್ಚರಿಕೆ ಕಾಣಿಸದಿರಬಹುದು. ಆದ್ದರಿಂದ ಯಾವುದೇ ಸಂದೇಶಕ್ಕೆ ಪ್ರತಿಕ್ರಿಯಿಸುವ ಮೊದಲು ಮಾಹಿತಿ ಪರಿಶೀಲಿಸುವುದು, ವೈಯಕ್ತಿಕ ವಿವರಗಳು, ಓಟಿಪಿ ಅಥವಾ ಬ್ಯಾಂಕ್ ಮಾಹಿತಿ ಹಂಚಿಕೊಳ್ಳದಿರುವುದು ಅತ್ಯಂತ ಸುರಕ್ಷಿತ ಕ್ರಮವಾಗಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories