ಉಡುಪಿ: 2 ಕೋಟಿ ರೂ. ಸಾಲದ ಆಮಿಷ; 148 ಗ್ರಾಂ ಚಿನ್ನ, ಲಕ್ಷಾಂತರ ನಗದು ಪಡೆದು ವಂಚನೆ
ಮೋಹಿನಿ ಶೆಟ್ಟಿಗಾರ್ ಅವರು 202ರ ಅಗಸ್ಟ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಬಲಿಯಲ್ಲಿದ್ದ ಸುಮಾರು 22 ಲಕ್ಷ ರೂಪಾಯಿ ಮೌಲ್ಯದ 148 ಗ್ರಾಂ ಚಿನ್ನಾಭರಣವನ್ನು ಸುಧೀಂದ್ರ ಫೈನಾನ್ಸ್ನಲ್ಲಿ ಅಡವಿಟ್ಟಿದ್ದರು. ಅದರಿಂದ ಬಂದ ಸುಮಾರು 4.36,000 ರೂಪಾಯಿ ಹಣವನ್ನು ಜೀನತ್ಳಿಗೆ ನೀಡಿದ್ದರು

ಉಡುಪಿ : ಸರಕಾರದಿಂದ ಸಿಗುವ ಅಲ್ಪಸಂಖ್ಯಾತರ ಯೋಜನೆಯ ಅಡಿಯಲ್ಲಿ 2 ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ಪಡೆದು ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಹೆರ್ಗಾ ತ್ರಿಶಂಕು ನಗರದ ನಿವಾಸಿ, ಚಿತ್ರಸೇನ್ ಎಂಬವರ ಪತ್ನಿ ಮೋಹಿನಿ ಶೆಟ್ಟಿಗಾರ್ ಎಂಬವರೇ ವಂಚನೆಗೆ ಒಳಗಾಗಿರುವ ಮಹಿಳೆ. ಜೀನತ್ ಎಂಬಾಕೆ 2020ರಲ್ಲಿ ತನಗೆ ತುರ್ತಾಗಿ 50 ಲಕ್ಷ ರೂ. ಹಣದ ಅವಶ್ಯಕತೆ ಇರುವುದನ್ನು ಹೇಳಿಕೊಂಡಿದ್ದರು. ತನಗೆ ಸರ್ಕಾರದ ಅಲ್ಪಸಂಖ್ಯಾತರ ಯೋಜನೆಯಡಿ 2 ಕೋಟಿ ರೂಪಾಯಿ ಸಾಲ ಮಂಜೂರಾತಿ ಆಗಲಿದ್ದು,, ಸಾಲದ ಹಣ ಕೈ ಸೇರಿದ ಕೂಡಲೇ ಚಿನ್ನ ಹಾಗೂ ನಗದು ವಾಪಾಸ್ ನೀಡುವುದಾಗಿ ಭರವಸೆ ನೀಡಿದ್ದಳು.
ಫೈನಾನ್ಸ್ನಲ್ಲಿ ಚಿನ್ನ ಅಡವಿಟ್ಟು ಹಣ ವಸೂಲಿ
ಆದರೆ ಜೀನತ್ ಮಾತನ್ನು ನಂಬಿದ ಮೋಹಿನಿ ಶೆಟ್ಟಿಗಾರ್ ಅವರು 202ರ ಅಗಸ್ಟ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಬಲಿಯಲ್ಲಿದ್ದ ಸುಮಾರು 22 ಲಕ್ಷ ರೂಪಾಯಿ ಮೌಲ್ಯದ 148 ಗ್ರಾಂ ಚಿನ್ನಾಭರಣವನ್ನು ಸುಧೀಂದ್ರ ಫೈನಾನ್ಸ್ನಲ್ಲಿ ಅಡವಿಟ್ಟಿದ್ದರು. ಅದರಿಂದ ಬಂದ ಸುಮಾರು 4.36,000 ರೂಪಾಯಿ ಹಣವನ್ನು ಜೀನತ್ಳಿಗೆ ನೀಡಿದ್ದರು. ಈ ವ್ಯವಹಾರದಲ್ಲಿ ಗೀತಾ ರಾವ್ ಎಂಬವರು ಕೂಡ ಜೊತೆಗೆ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಎಂಐ ಪಾವತಿ ನಿಲ್ಲಿಸಿ ವಂಚನೆ : ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ
ಸಾಲವಾಗಿ ಪಡೆದುಕೊಂಡಿದ್ದ ಹಣಕ್ಕೆ ಜೀನತ್ ಸುಮಾರು ಒಂದೂವರೆ ಲಕ್ಷಗಳ ಇಎಂಐ ಪಾವತಿ ಮಾಡುತ್ತಾ ಬಂದಿದ್ದಳು. ಆದರೆ ತದನಂತರದಲ್ಲಿ ಸಾಲ ಮರುಪಾವತಿಯನ್ನೇ ನಿಲ್ಲಿಸಿ ಬಿಟ್ಟಿದ್ದಳು. ಜೊತೆಗೆ ಮೋಹಿನಿ ಅವರ ಚಿನ್ನಾಭರಣಗಳನ್ನು ವಾಪಾಸ್ ನೀಡದೇ ವಂಚಿಸಿದ್ದಾಳೆ.
ಈ ಬಗ್ಗೆ ಮೋಹಿನಿ ಶೆಟ್ಟಿಗಾರ್ ಅವರು ಜೀನತ್ ಬಳಿಯಲ್ಲಿ ಕೇಳಲು ಮನೆಗೆ ಹೋದಾಗ, ಜೀನತ್ ಹಾಗೂ ಆಕೆಯ ತಮ್ಮನ ಹೆಂಡತಿ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂಧಿಸಿ, ಬೈದಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
50 ಲಕ್ಷ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿ, 148 ಚಿನ್ನಾಭರಣವನ್ನು ವಾಪಾಸ್ ನೀಡದೇ ವಂಚನೆ ನಡೆಸಿರುವ ಕುರಿತು ಸದ್ಯ ಜೀನತ್ ಹಾಗೂ ಆಕೆಯ ತಂಡದ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
woman cheated gold and cash zeenath case registered Kannada News

