ವಾರಣಾಸಿ ರೈಲಿನಲ್ಲಿ ಗರ್ಭಿಣಿಗೆ ತುರ್ತು ಹೆರಿಗೆ: ತಾಯಿ-ಮಗುವಿನ ಜೀವ ಉಳಿಸಿದ ಹಾಸನದ ವಿದ್ಯಾರ್ಥಿನಿಯರು!

ಚಲಿಸುತ್ತಿದ್ದ ರೈಲಿನಲ್ಲಿ ಹಠಾತ್ತನೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಸೀಮಿತ ಸಂಪನ್ಮೂಲಗಳ ನಡುವೆಯೇ ಅತ್ಯಂತ ಯಶಸ್ವಿಯಾಗಿ ಹೆರಿಗೆ ಮಾಡಿಸಿ, ತಾಯಿ ಮತ್ತು ನವಜಾತ ಶಿಶುವಿನ ಪ್ರಾಣ ಉಳಿಸುವ ಮೂಲಕ ಹಾಸನದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯರು ಮಾನವೀಯತೆ ಮೆರೆದಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿ ಹಠಾತ್ತನೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಸೀಮಿತ ಸಂಪನ್ಮೂಲಗಳ ನಡುವೆಯೇ ಅತ್ಯಂತ ಯಶಸ್ವಿಯಾಗಿ ಹೆರಿಗೆ ಮಾಡಿಸಿ, ತಾಯಿ ಮತ್ತು ನವಜಾತ ಶಿಶುವಿನ ಪ್ರಾಣ ಉಳಿಸುವ ಮೂಲಕ ಹಾಸನದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯರು ಮಾನವೀಯತೆ ಮೆರೆದಿದ್ದಾರೆ.

ಹಾಸನದ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (SDM) ಮಾನಸರೋಗ ವಿಭಾಗದ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿನಿಯರಾದ ಡಾ. ರಶ್ಮಿ ಬಿಳಗಿ, ಡಾ. ಲತಾಶ್ರೀ ಎನ್. ಮತ್ತು ಡಾ. ಶಾಹಿನ್ ಎಂ. ಅವರೇ ಈ ರಕ್ಷಣಾ ಕಾರ್ಯ ಮಾಡಿದ ಧೀರ ವೈದ್ಯೆಯರು.

ಡಾ. ರಶ್ಮಿ, ಡಾ. ಲತಾಶ್ರೀ ಹಾಗೂ ಡಾ. ಶಾಹಿನ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಆಂಧ್ರಪ್ರದೇಶದ ವಿಜಯವಾಡ ಸಮೀಪ ಚಲಿಸುತ್ತಿದ್ದಾಗ, ಅದೇ ಬೋಗಿಯಲ್ಲಿದ್ದ ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರಿಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡು ಗರ್ಭಕೋಶದ ನೀರು ಸೋರಲು ಆರಂಭಿಸಿತು. ಆ ಸಮಯದಲ್ಲಿ ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಅಥವಾ ತುರ್ತು ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿಲ್ಲ. ಗರ್ಭಿಣಿಯ ಕಿರುಚಾಟ ಮತ್ತು ಅಸಹಾಯಕತೆಯನ್ನು ಕಂಡ ಮೂವರು ವಿದ್ಯಾರ್ಥಿನಿಯರು ತಕ್ಷಣವೇ ಆಕೆಯ ನೆರವಿಗೆ ಧಾವಿಸಿದರು.

ಸಹ ಪ್ರಯಾಣಿಕರ ಸಹಾಯದೊಂದಿಗೆ ಬೋಗಿಯಲ್ಲಿ ತಾತ್ಕಾಲಿಕ ಮರೆಯನ್ನು ಸೃಷ್ಟಿಸಿ ಹೆರಿಗೆ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಆದರೆ, ವೈದ್ಯಕೀಯವಾಗಿ ಇದೊಂದು ಅತ್ಯಂತ ಕಠಿಣವಾದ ಪ್ರಕರಣವಾಗಿತ್ತು. ಹೆರಿಗೆಯ ಸಮಯದಲ್ಲಿ ಮಗುವಿನ ಕುತ್ತಿಗೆಗೆ ಹೊಕ್ಕಳಬಳ್ಳಿ ಎರಡು ಸುತ್ತು ಸುತ್ತಿಕೊಂಡಿರುವುದು ಇವರ ಗಮನಕ್ಕೆ ಬಂದಿತು. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ತಪ್ಪಾದರೂ ಮಗುವಿನ ಜೀವಕ್ಕೆ ಆಪತ್ತು ಬರುವ ಸಾಧ್ಯತೆ ಇರುತ್ತದೆ. ಆದರೆ ಧೃತಿಗೆಡದ ಈ ಯುವ ವೈದ್ಯೆಯರು ತಮ್ಮ ಕ್ಲಿನಿಕಲ್ ಕೌಶಲ್ಯವನ್ನು ಬಳಸಿ, ಅತ್ಯಂತ ಜಾಗರೂಕತೆಯಿಂದ ಹೊಕ್ಕಳಬಳ್ಳಿಯನ್ನು ಬಿಡಿಸಿ ಹೆಣ್ಣು ಮಗುವಿನ ಸುರಕ್ಷಿತ ಜನನಕ್ಕೆ ಕಾರಣರಾಗಿದ್ದಾರೆ.

ಮಗು ಜನಿಸಿದ ತಕ್ಷಣವೇ ಅಳದ ಕಾರಣ ಇಡೀ ಬೋಗಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವಿದ್ಯಾರ್ಥಿನಿಯರು ನವಜಾತ ಶಿಶುವಿಗೆ ಪ್ರಾಥಮಿಕ ಪುನರುಜ್ಜೀವನ ಚಿಕಿತ್ಸೆಯನ್ನು ನೀಡಿದ್ದಾರೆ. ಇವರ ಸತತ ಪ್ರಯತ್ನದ ಫಲವಾಗಿ ಮಗು ಜೋರಾಗಿ ಅಳಲು ಪ್ರಾರಂಭಿಸಿದಾಗ ಇಡೀ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಪ್ರಸ್ತುತ ತಾಯಿ ಮತ್ತು ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂದಿನ ರೈಲ್ವೆ ನಿಲ್ದಾಣ ಬಂದ ತಕ್ಷಣ ಇಬ್ಬರನ್ನೂ ಹೆಚ್ಚಿನ ಆರೈಕೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲಿನಲ್ಲಿದ್ದ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು, ಅತ್ಯಂತ ಜಾಣ್ಮೆಯಿಂದ ಎರಡು ಜೀವಗಳನ್ನು ಉಳಿಸಿದ ಎಸ್‌ಡಿಎಂ ಕಾಲೇಜಿನ ಈ ಆಯುರ್ವೇದ ವೈದ್ಯ ವಿದ್ಯಾರ್ಥಿನಿಯರ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.