ಮಳೆಗಾಲದ ಸ್ಪೆಷಲ್: ಬಾಯಲ್ಲಿ ನೀರೂರಿಸುವ ‘ಹಲಸಿನ ಹಣ್ಣಿನ ಸಿಹಿ ಪಡ್ಡು’! ಇಲ್ಲಿದೆ ಈಸಿ ರೆಸಿಪಿ

ದಕ್ಷಿಣ ಭಾರತದ ಮನೆ ಮನೆಗಳಲ್ಲೂ ಪಡ್ಡು (ಗುಳಿಯಪ್ಪ) ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ದೋಸೆ ಹಿಟ್ಟಿನಿಂದ ಮಸಾಲ ಪಡ್ಡು ಅಥವಾ ಇನ್‌ಸ್ಟಂಟ್ ಆಗಿ ರವೆ-ಮೊಸರು ಪಡ್ಡು ಮಾಡುವುದು ನಮಗೆಲ್ಲ ಗೊತ್ತು. ಆದರೆ ಈಗ ಮಳೆಗಾಲದ ಸೀಸನ್.

ದಕ್ಷಿಣ ಭಾರತದ ಮನೆ ಮನೆಗಳಲ್ಲೂ ಪಡ್ಡು (ಗುಳಿಯಪ್ಪ) ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ದೋಸೆ ಹಿಟ್ಟಿನಿಂದ ಮಸಾಲ ಪಡ್ಡು ಅಥವಾ ಇನ್‌ಸ್ಟಂಟ್ ಆಗಿ ರವೆ-ಮೊಸರು ಪಡ್ಡು ಮಾಡುವುದು ನಮಗೆಲ್ಲ ಗೊತ್ತು. ಆದರೆ ಈಗ ಮಳೆಗಾಲದ ಸೀಸನ್. ಮಾರುಕಟ್ಟೆಯಲ್ಲಿ ಹಲಸಿನ ಹಣ್ಣಿನ ಭರಾಟೆ ಜೋರಾಗಿದೆ. ಪೋಷಕಾಂಶಗಳ ಗಣಿಯಾಗಿರುವ, ಆರೋಗ್ಯಕ್ಕೆ ಹಿತವಾಗಿರುವ ಹಲಸಿನ ಹಣ್ಣನ್ನು ಬರೀ ಹಾಗೇ ತಿಂದು ಬೇಸರವಾಗಿದ್ದರೆ, ಈ ಬಾರಿ ಅದರಿಂದ ಸಖತ್ ಟೇಸ್ಟಿಯಾದ ‘ಹಲಸಿನ ಹಣ್ಣಿನ ಸ್ವೀಟ್ ಪಡ್ಡು’ ಟ್ರೈ ಮಾಡಿ.

ಕೇವಲ 4-5 ಸಾಮಗ್ರಿಗಳನ್ನು ಬಳಸಿ, ಅತ್ಯಂತ ಸುಲಭವಾಗಿ ಮಾಡಬಹುದಾದ ಈ ಸ್ಪೆಷಲ್ ಖಾದ್ಯದ ಕಂಪ್ಲೀಟ್ ರೆಸಿಪಿ ಇಲ್ಲಿದೆ:

ಬೇಕಾಗುವ ಸಾಮಗ್ರಿಗಳು:

  • ದೋಸೆ ಅಕ್ಕಿ: 1 ಕಪ್‌
  • ಹಲಸಿನ ಹಣ್ಣಿನ ತೊಳೆ: 1 ಕಪ್ (ಬೀಜ ತೆಗೆದದ್ದು)
  • ಬೆಲ್ಲ: ಸಿಹಿಗೆ ತಕ್ಕಷ್ಟು
  • ತೆಂಗಿನಕಾಯಿ ತುರಿ: ಅರ್ಧ ಕಪ್
  • ಏಲಕ್ಕಿ: 2
  • ಉಪ್ಪು: ರುಚಿಗೆ ತಕ್ಕಷ್ಟು (ಒಂದು ಚಿಟಿಕೆ)
  • ತುಪ್ಪ: ಪಡ್ಡು ಬೇಯಿಸಲು

ತಯಾರಿಸುವ ಸರಳ ವಿಧಾನ:

  1. ಅಕ್ಕಿ ನೆನೆಸಿಡಿ: ಮೊದಲಿಗೆ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, 1 ರಿಂದ 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

  2. ನುಣ್ಣಗೆ ರುಬ್ಬಿಕೊಳ್ಳಿ: ಈಗ ಮಿಕ್ಸಿ ಜಾರ್‌ಗೆ ನೆನೆಸಿದ ಅಕ್ಕಿ, ಸ್ವೀಟ್‌ಗೆ ತಕ್ಕಷ್ಟು ಬೆಲ್ಲ, ಏಲಕ್ಕಿ, ತೆಂಗಿನಕಾಯಿ ತುರಿ, ಹಲಸಿನ ಹಣ್ಣಿನ ತೊಳೆಗಳು ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ನೀರು ಹಾಕದೆ (ಅಥವಾ ತೀರಾ ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಚಿಮುಕಿಸಿ) ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಸಾಮಾನ್ಯ ಪಡ್ಡು ಹಿಟ್ಟಿನ ಹದಕ್ಕೆ ಇರಲಿ.

  3. ಪಡ್ಡು ಬೇಯಿಸಿ: ಗ್ಯಾಸ್ ಒಲೆ ಮೇಲೆ ಪಡ್ಡು ಪ್ಯಾನ್ (ಹಂಚು) ಇಟ್ಟು ಕಾಯಿಸಿ, ಎಲ್ಲಾ ಗುಳಿಗಳಿಗೂ ಸ್ವಲ್ಪ ತುಪ್ಪ ಹಾಕಿ. ತುಪ್ಪ ಕಾದ ನಂತರ, ಚಮಚದ ಸಹಾಯದಿಂದ ಸಿದ್ಧಪಡಿಸಿದ ಹಿಟ್ಟನ್ನು ಗುಳಿಗಳಿಗೆ ತುಂಬಿಸಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.

  4. ತಿರುಗಿಸಿ ಹಾಕಿ: ಕೆಳಭಾಗ ಚೆನ್ನಾಗಿ ಬೆಂದು, ಪಡ್ಡು ಸೈಡ್ ಬಿಟ್ಟಾಗ ಅದನ್ನು ಮಗುಚಿ ಹಾಕಿ. ಇನ್ನೊಂದು ಭಾಗವೂ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿದರೆ ಬಿಸಿಬಿಸಿ ಪಡ್ಡು ರೆಡಿ.

ಈ ಮಳೆಗಾಲದ ತಂಪು ವಾತಾವರಣಕ್ಕೆ ಕರಮ್-ಕುರಮ್ ಹಾಗೂ ಸಾಫ್ಟ್ ಆಗಿರುವ ಹಲಸಿನ ಹಣ್ಣಿನ ಸಿಹಿ ಪಡ್ಡು ಅದ್ಭುತ ಕಾಂಬಿನೇಷನ್. ಈ ಸೀಸನ್ ಮುಗಿಯುವ ಮುನ್ನ ಒಮ್ಮೆ ಖಂಡಿತಾ ಮಾಡಿನೋಡಿ!

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.