ನವದೆಹಲಿ : ಲಾಕ್ ಡೌನ್ ನಲ್ಲಿ ಸಿಲುಕಿರುವ ಮೀನುಗಾರರಿಗೆ ಕೇಂದ್ರ ಸರಕಾರ ಬಂಪರ್ ಆಫರ್ ನೀಡಿದೆ. ಕೇಂದ್ರ ಸರಕಾರ ಘೋಷಿಸಿರುವ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಪ್ಯಾಕೇಜ್ ಘೋಷಿಸಿದ್ದು, ಬರೋಬ್ಬರಿ 20,000 ಕೋಟಿ ರೂಪಾಯಿಗಳನ್ನು ಮೀನುಗಾರಿಕೆಗೆ ಮೀಸಲಿಟ್ಟಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಘೋಷಿಸಿರುವ ವಿಶೇಷ ಪ್ಯಾಕೇಜ್ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲಿ ಮೀನುಗಾರಿಕೆಯನ್ನು ಅಭಿವೃದ್ದಿ ಪಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಅದ್ರಲ್ಲೂ ಮೀನುಗಾರಿಕಾ ರಫ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. 5 ವರ್ಷಗಳಲ್ಲಿ 70 ಲಕ್ಷ ಟನ್ ಮೀನಿನ ಮರಿಗಳ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ.

ಮೀನು ಮರಿಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 242 ಮೀನುಮರಿ ಉತ್ಪಾದನಾ ಘಟಕಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಲಾಕ್ ಡೌನ್ ಅವಧಿಯಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೀನುಗಾರಿಕೆಯಿಂದಾಗಿ 55 ಲಕ್ಷ ಜನರಿಗೆ ಉದ್ಯೋಗ ಒದಗಿಸಲು ಮುಂದಾಗಿದೆ. ಪ್ರತೀ ವರ್ಷ 1 ಲಕ್ಷ ಕೋಟಿ ಮೌಲ್ಯದ ಮೀನನ್ನು ರಫ್ತು ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ದೇಶದಾದ್ಯಂತ 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು, ಕೋಲ್ಡ್ ಸ್ಟೋರೇಜ್ ಹಾಗೂ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಲ್ಲದೇ ಮೀನುಗಾರರಿಗೆ ಇದ್ದ ಆಮದು ಅವಧಿಯನ್ನು 3 ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.