ಗಂಗೊಳ್ಳಿ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿ
ಉಡುಪಿ : ಗಂಗೊಳ್ಳಿ ಸಮೀಪದ ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಪ್ರದೇಶದಲ್ಲಿ ವಾಕಿಂಗ್‌ಗೆ ತೆರಳಿದ್ದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಸರವನ್ನು ಬಲಾತ್ಕಾರವಾಗಿ ಕಸಿದುಕೊಂಡು ಪರಾರಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಡಾನ್ ಬಾಸ್ಕೋ ಶಾಲೆ ರಸ್ತೆಯಲ್ಲಿ ಬೆಳಗಿನ ಜಾವ ವಾಯು ವಿಹಾರಕ್ಕಾಗಿ ತೆರಳಿದ್ದ ಸೀತಾ (83) ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ, ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿ ಅವರ ಕುತ್ತಿಗೆಯಲ್ಲಿದ್ದ ಅಂದಾಜು ರೂ. 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಿಂದ ಆತಂಕಗೊಂಡ ವೃದ್ಧೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸ್ಥಳೀಯರು ಧಾವಿಸಿ ಬಂದಿದ್ದಾರೆ. ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಬೆಳಗಿನ ಸಮಯದಲ್ಲೇ ನಡೆದ ಈ ಕಳ್ಳತನ ಘಟನೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದ್ದು, ವೃದ್ಧರು ಹಾಗೂ ಮಹಿಳೆಯರು ಎಚ್ಚರಿಕೆಯಿಂದ ಸಂಚರಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.



