ಪೆಟ್ರೋಲ್ ಕಾರಿಗೆ CNG ಕಿಟ್ ಅಳವಡಿಸಲು ಎಷ್ಟು ಖರ್ಚಾಗುತ್ತದೆ? ಇಲ್ಲಿದೆ ಮಹತ್ವದ ಮಾಹಿತಿ
ಪೆಟ್ರೋಲ್ ಬೆಲೆ ಏರಿಕೆಯಿಂದ ಅನೇಕರು ತಮ್ಮ ಕಾರಿಗೆ CNG ಕಿಟ್ ಅಳವಡಿಸಲು ಮುಂದಾಗುತ್ತಿದ್ದಾರೆ. ಆದರೆ ಖರ್ಚು, ಆರ್ಟಿಒ ಅನುಮತಿ ಹಾಗೂ ಸುರಕ್ಷತೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಭಾರತದಲ್ಲಿ ಇಂಧನ ದರಗಳು ಏರಿಕೆಯಾಗುತ್ತಿರುವ ಹಿನ್ನೆಲೆ CNG ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸ CNG ಕಾರುಗಳನ್ನು ಖರೀದಿಸುವವರ ಜೊತೆಗೆ ಈಗಾಗಲೇ ಪೆಟ್ರೋಲ್ ಕಾರು ಹೊಂದಿರುವವರೂ ತಮ್ಮ ವಾಹನಗಳಿಗೆ CNG ಕಿಟ್ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.
CNG ಬಳಕೆಯ ಪ್ರಮುಖ ಲಾಭವೆಂದರೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಮೈಲೇಜ್ ಸಿಗುವುದು. ಪೆಟ್ರೋಲ್ಗೆ ಹೋಲಿಸಿದರೆ CNG ದರ ಕಡಿಮೆ ಇರುವುದರಿಂದ ವಾಹನ ಸವಾರರಿಗೆ ತಿಂಗಳಿಗೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಜೊತೆಗೆ ಇದು ಪರಿಸರ ಸ್ನೇಹಿಯೂ ಆಗಿದೆ ಎಂದು ವಾಹನ ತಜ್ಞರು ಹೇಳುತ್ತಾರೆ.
ಆದರೆ ಯಾವುದೇ ಕಾರಿಗೂ ನೇರವಾಗಿ CNG ಕಿಟ್ ಅಳವಡಿಸಲು ಸಾಧ್ಯವಿಲ್ಲ. ಕಾರಿನ ಎಂಜಿನ್ ಹಾಗೂ ತಾಂತ್ರಿಕ ಸಾಮರ್ಥ್ಯ ಅದಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ಸರಿಯಾದ ಮಾಹಿತಿ ಇಲ್ಲದೆ ಕಿಟ್ ಅಳವಡಿಸಿದರೆ ಮುಂದಿನ ದಿನಗಳಲ್ಲಿ ಎಂಜಿನ್ ಸಮಸ್ಯೆ ಹಾಗೂ ಸುರಕ್ಷತಾ ಅಪಾಯಗಳು ಎದುರಾಗಬಹುದು.
ಭಾರತದಲ್ಲಿ CNG ಕಿಟ್ ಅಳವಡಿಸುವ ವೆಚ್ಚ ಸಾಮಾನ್ಯವಾಗಿ ₹35,000 ರಿಂದ ₹80,000ರವರೆಗೆ ಇರಬಹುದು. ಕಿಟ್ ಬ್ರ್ಯಾಂಡ್, ಕಾರಿನ ಮಾದರಿ ಮತ್ತು ಅಳವಡಿಕೆ ಗುಣಮಟ್ಟದ ಆಧಾರದ ಮೇಲೆ ವೆಚ್ಚ ಬದಲಾಗುತ್ತದೆ. ಇದರಲ್ಲಿ ಕಿಟ್ ಬೆಲೆ ಮಾತ್ರವಲ್ಲದೆ ಫಿಟ್ಮೆಂಟ್ ಚಾರ್ಜ್, ಆರ್ಟಿಒ ಅನುಮತಿ ಶುಲ್ಕ ಹಾಗೂ ಇನ್ಸೂರೆನ್ಸ್ ಅಪ್ಡೇಟ್ ವೆಚ್ಚವೂ ಸೇರಿರುತ್ತದೆ.
ಸರ್ಕಾರದ ನಿಯಮಗಳ ಪ್ರಕಾರ 3.5 ಟನ್ಗಿಂತ ಕಡಿಮೆ ತೂಕದ ವಾಹನಗಳಿಗೆ ಮಾತ್ರ CNG ಕಿಟ್ ಅಳವಡಿಸಲು ಅವಕಾಶ ಇದೆ. ಹೀಗಾಗಿ ಕಾರಿನ ತೂಕ ಮತ್ತು ಮಾದರಿ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳುವುದು ಮುಖ್ಯವಾಗಿದೆ.
ಇನ್ನು ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ಕಿಟ್ಗಳೂ ಸುರಕ್ಷಿತವಾಗಿರುವುದಿಲ್ಲ. ಆರ್ಟಿಒ ಅನುಮೋದಿತ ಹಾಗೂ ಗುಣಮಟ್ಟದ ಕಿಟ್ ಬಳಸುವುದು ಅಗತ್ಯ. ಕಡಿಮೆ ಬೆಲೆಗಾಗಿ ಸ್ಥಳೀಯ ಅಥವಾ ನಕಲಿ ಕಿಟ್ ಬಳಸಿದರೆ ಎಂಜಿನ್ ಹಾನಿ, ಗ್ಯಾಸ್ ಸೋರಿಕೆ ಮತ್ತು ಅಪಘಾತದಂತಹ ಅಪಾಯಗಳು ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.



