ಕೇವಲ 54 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್! ಬಜೆಟ್ ಬೆಲೆಯ ಬಡವರ ಬಂಡಿ ಇದು
ಬಜೆಟ್ ದರದಲ್ಲಿ ಉತ್ತಮ ಫೀಚರ್‌ಗಳೊಂದಿಗೆ ಹೊಸ EZI Ray 01 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ನಗರ ಪ್ರಯಾಣಕ್ಕೆ ಸೂಕ್ತವಾಗಿದ್ದು, ಕಡಿಮೆ ಬೆಲೆಗೆ ಉತ್ತಮ ರೇಂಜ್ ಮತ್ತು ವೇಗ ನೀಡುತ್ತದೆ.

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ, ಹೊಸ ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಚೀನಾದ EZI ಕಂಪನಿ ತನ್ನ ಹೊಸ EZI Ray 01 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಸ್ಕೂಟರ್ ಮೊದಲಿಗೆ ಮಲೇಶಿಯಾದಲ್ಲಿ ಬಿಡುಗಡೆ ಆಗಲಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ.
ದರದ ವಿಷಯದಲ್ಲಿ ಈ ಸ್ಕೂಟರ್ ಹೆಚ್ಚು ಆಕರ್ಷಕವಾಗಿದೆ. ಮಲೇಶಿಯನ್ ಕರೆನ್ಸಿಯಲ್ಲಿ 2,288 ರಿಂಗಿಟ್‌ಗಳ ಬೆಲೆಯಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ರೂಪಾಯಿಯಲ್ಲಿ ಇದು ಸುಮಾರು ₹54,000 ಆಗುತ್ತದೆ. ಕಡಿಮೆ ದರದಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವ ವಾಹನವಾಗಿ ಇದು ಪರಿಗಣಿಸಲಾಗುತ್ತಿದೆ. ಬಿಳಿ, ನೀಲಿ, ಬೂದು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಾಗಲಿದೆ.
ಪರ್ಫಾರ್ಮೆನ್ಸ್ ವಿಚಾರದಲ್ಲಿ ನೋಡಿದರೆ, 2kW ಮೋಟಾರ್ ಮತ್ತು 32Ah ಬ್ಯಾಟರಿ ಹೊಂದಿರುವ ಈ ಸ್ಕೂಟರ್ ಉತ್ತಮ ಸಾಮರ್ಥ್ಯ ನೀಡುತ್ತದೆ. ಗರಿಷ್ಠ 68 ಕಿಮೀ ವೇಗದಲ್ಲಿ ಸಂಚರಿಸಬಹುದು. ಸಾಮಾನ್ಯವಾಗಿ 25 ಕಿಮೀ ವೇಗದಲ್ಲಿ ಚಾಲನೆ ಮಾಡಿದರೆ, ಒಂದು ಚಾರ್ಜ್‌ನಲ್ಲಿ 120 ಕಿಮೀ ವರೆಗೆ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ.
ಸುರಕ್ಷತೆ ಮತ್ತು ಸೌಕರ್ಯಗಳಿಗೂ ವಿಶೇಷ ಗಮನ ನೀಡಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಡಬಲ್ ಸ್ಪ್ರಿಂಗ್ ವ್ಯವಸ್ಥೆ ಇದೆ. ಹೈಡ್ರಾಲಿಕ್ ಬ್ರೇಕ್ ವ್ಯವಸ್ಥೆಯಿಂದ ಉತ್ತಮ ನಿಯಂತ್ರಣ ದೊರೆಯುತ್ತದೆ. ಜೊತೆಗೆ ಮೂರು ಸ್ಪೀಡ್ ಮೋಡ್‌ಗಳನ್ನು ನೀಡಲಾಗಿದೆ.
ಸ್ಕೂಟರ್ ಒಟ್ಟು ತೂಕ ಸುಮಾರು 130 ಕೆಜಿ ಆಗಿದ್ದು, ಸೀಟ್ ಎತ್ತರ 73.5 ಸೆಂ.ಮೀ ಇದೆ. ಬ್ಯಾಟರಿಗಾಗಿ 2 ವರ್ಷ ಅಥವಾ 20,000 ಕಿಮೀ ವಾರಂಟಿ ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಸುಲಭ ಸಂಚಾರಕ್ಕೆ ಇದು ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.



