Rapido : ಜಾಹೀರಾತುಗಳಲ್ಲಿ ತಪ್ಪು ಸಂದೇಶ : ರ್ಯಾಪಿಡೋ ಕಂಪನಿಗೆ ₹10 ಲಕ್ಷ ದಂಡ

Rapido : ಬೈಕ್​ ಟ್ಯಾಕ್ಸಿ ಎಂದರೆ ನೆನಪಾಗುವುದೇ ರಾಪಿಡೊ . ಆದರೆ ಇದೇ ರಾಪಿಡೊ ಕಂಪನಿಗೆ ಇದೀಗ ಗ್ರಾಹಕ ಸಂರಕ್ಷಣಾ ಕಾವಲು ಸಂಸ್ಥೆಯಾದ CCPA ಬರೋಬ್ಬರಿ 10 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

ಜನರಿಗೆ ತಪ್ಪು ಮಾಹಿತಿಯನ್ನು ನೀಡುವಂತಹ ಜಾಹಿರಾತನ್ನು ರಾಪಿಡೊ ಕಂಪನಿ ಪ್ರಸರಿಸಿದ ಹಿನ್ನೆಲೆಯಲ್ಲಿ ಈ ಬೈಕ್​ ಟ್ಯಾಕ್ಸಿ ಸಂಸ್ಥೆ ಇದೀಗ ಭಾರೀ ಮೊತ್ತದ ದಂಡ ತೆರಬೇಕಾಗಿ ಬಂದಿದೆ.

ಈ ಕಂಪನಿಯು ‘5 ನಿಮಿಷಗಳಲ್ಲಿ ಆಟೋ ಅಥವಾ 50 ರೂಪಾಯಿಗಳನ್ನು ಪಡೆಯಿರಿ’ ಎಂಬ ಆಫರ್​ ಹೊಂದಿದ್ದ ಜಾಹೀರಾತನ್ನು ಪ್ರಸರಿಸಿತ್ತು. ಕೊಟ್ಟ ಮಾತಿನಂತೆ ಗ್ರಾಹಕರಿಗೆ ಭರವಸೆಯನ್ನು ಈಡೇರಿಸದ ಕಾರಣ ಗ್ರಾಹಕರಿಗೆ ಮರುಪಾವತಿ ಮಾಡುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ.

ಅಲ್ಲದೇ ಇದು ಗ್ರಾಹಕರನ್ನು ದಾರಿತಪ್ಪಿಸುವಂತಹ ಸುಳ್ಳು ಜಾಹೀರಾತು ಎಂದು ಹೇಳುವ ಮೂಲಕ ರಾಪಿಡೊ ಕಂಪನಿಗೆ ಛಾಟಿ ಬೀಸಿದೆ. ರಾಪಿಡೊ ಕಂಪನಿಯು ಸುಳ್ಳು ಜಾಹೀರಾತುಗಳನ್ನು ಪ್ರಸರಿಸಿ ಜನರ ದಾರಿ ತಪ್ಪಿಸುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ CCPA ಈ ಸಂಬಂಧ ವಿವರವಾದ ಪರಿಶೀಲನೆಗಳನ್ನು ಕೈಗೊಂಡಿತ್ತು.

ವಿಚಾರಣೆಯ ಸಂದರ್ಭದಲ್ಲಿ ಬೈಕ್​ ಟ್ಯಾಕ್ಸಿ ಸಂಸ್ಥೆಯು ಸುಳ್ಳು ಜಾಹೀರಾತಿನ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸಿ ಅನ್ಯಾಯ ಎಸಗಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಈ ಜಾಹೀರಾತನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ನಿರ್ದೇಶನ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿ ನೀಡಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಜುಲೈ-ಆಗಸ್ಟ್‌ ಕಂತಿನ 4,000 ರೂ. ಬಿಡುಗಡೆ

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ನೀಡಿರುವ ಮಾಹಿತಿ ಪ್ರಕಾರ, ಜೂನ್​ 2024ರಿಂದ ಜುಲೈ 2025ರವರೆಗೆ ರಾಪಿಡೊ ವಿರುದ್ಧ 1,224ಕ್ಕೆ ಏರಿಕೆ ಕಂಡಿತ್ತು. ಏಪ್ರಿಲ್​ 2023ರಿಂದ ಮೇ 2024ರವರೆಗೆ ಒಟ್ಟೂ 575 ದೂರುಗಳು ದಾಖಲಾಗಿದ್ದವು.

NCH ಗ್ರಾಹಕರಿಂದ ರಾಪಿಡೊ ವಿರುದ್ಧ ಹೆಚ್ಚಿನ ಸಂಖ್ಯೆಯ ದೂರುಗಳನ್ನು ಸ್ವೀಕರಿಸಿದೆ. ಈ ದೂರುಗಳಲ್ಲಿ ಸೇವಾ ಕೊರತೆಗಳು, ಮರುಪಾವತಿ ಮಾಡಿಲ್ಲ, ಅಧಿಕ ಶುಲ್ಕ ವಿತರಣೆ, ಭರವಸೆ ನೀಡಿದ ಸೇವೆಗಳನ್ನು ತಲುಪಿಸುವಲ್ಲಿ ವೈಫಲ್ಯತೆ ಹಾಗೂ ಜಾಹೀರಾತಿನಲ್ಲಿ ತಿಳಿದಂತೆ 5 ನಿಮಿಷಗಳ ಸೇವೆಯನ್ನು ಪೂರೈಸಿಲ್ಲ ಎಂಬಂತಹ ವಿಷಯಗಳು ಸೇರಿದ್ದವು.

ಇದನ್ನೂ ಓದಿ : EPFO : ಇಪಿಎಫ್‌ಒ ನೌಕರರಿಗೆ ಸಿಹಿ ಸುದ್ದಿ: ಸಾವಿನ ಪರಿಹಾರ ನಿಧಿ ದ್ವಿಗುಣ, ₹15 ಲಕ್ಷಕ್ಕೆ ಏರಿಕೆ

ಈ ದೂರುಗಳಲ್ಲಿ ಗ್ರಾಹಕರು ನಾವು ರಾಪಿಡೊ ಕಂಪನಿಗೆ ಈ ಬಗ್ಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

Rapido company fined ₹10 lakh for misleading message in advertisements in Kannada News

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories