ರೆನಾಲ್ಟ್‌ ಡಸ್ಟರ್‌ನಿಂದ ಮರ್ಸಿಡಿಸ್‌ ವಿ–ಕ್ಲಾಸ್‌ವರೆಗೆ: ಮಾರ್ಚ್‌ 2026 ನಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿ

ವಾಹನ ಮಾರುಕಟ್ಟೆಯಲ್ಲಿ ಮಾರ್ಚ್‌ 2026 ವಿಶೇಷವಾಗಿದೆ. ಕೈಗೆಟುಕುವ SUV ಗಳಿಂದ ಹಿಡಿದು ಪ್ರೀಮಿಯಂ ಐಷಾರಾಮಿ ಕಾರುಗಳವರೆಗೆ ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿವೆ.

ಕಾರು ಖರೀದಿದಾರರಿಗೆ ಮಾರ್ಚ್‌ ತಿಂಗಳು ಸಿಕ್ಕಾಪಟ್ಟೆ ವಿಶೇಷವಾಗಿರಲಿದೆ. ಏಕೆಂದರೆ ಈ ತಿಂಗಳು ಕೈಗೆಟುಕುವ SUV ಗಳಿಂದ ಹಿಡಿದು ಪ್ರೀಮಿಯಂ ಐಷಾರಾಮಿ ಕಾರುಗಳವರೆಗೆ ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿವೆ. ರೆನಾಲ್ಟ್ ಡಸ್ಟರ್‌ನಿಂದ ಮರ್ಸಿಡಿಸ್-ಬೆನ್ಜ್ V-ಕ್ಲಾಸ್ ವರೆಗಿನ ಬಹು ವಿಧದ ಹಾಗೂ ಬೆಲೆಯ ಕಾರುಗಳು ವಾಹನ ಪ್ರಪಂಚದಲ್ಲಿ ಹಿಂದಿನ ತಿಂಗಳಿಗಿಂತಲೂ ಹೆಚ್ಚಿನ ಆಯ್ಕೆ ನೀಡಲಿದೆ. ಹಾಗಾದರೆ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳು ಯಾವುವು ಎಂದು ನೋಡೋಣ.

ರೆನಾಲ್ಟ್‌ ಡಸ್ಟರ್‌ 

2022ರಲ್ಲಿ ಸ್ಥಗಿತವಾಗಿದ್ದ ಡಸ್ಟರ್‌, ಇದೀಗ ಮಾರ್ಚ್‌ 17 ರಂದು ಪುನಃ ಭಾರತದ ಮಾರುಕಟ್ಟೆಗೆ ಮರಳಲಿದೆ. 2 ಟರ್ಬೊ-ಪೆಟ್ರೋಲ್ ಆಯ್ಕೆಗಳೊಂದಿಗೆ ಲಭ್ಯವಿರುವ ಡಸ್ಟರ್‌ 100 hp ಉತ್ಪಾದಿಸುವ 1-ಲೀಟರ್ ಎಂಜಿನ್ ಮತ್ತು 163 hp ಉತ್ಪಾದನೆಯ 1.3-ಲೀಟರ್ ನ ನಾಲ್ಕು-ಸಿಲಿಂಡರ್ ಎಂಜಿನ್ ಹೊಂದಿದೆ. ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಹೊಂದಿಸಲಾಗಿದೆ. ಆದರೆ 1.3-ಲೀಟರ್ ಎಂಜಿನ್ 6-ಸ್ಪೀಡ್ DCT ಯ ಆಯ್ಕೆಯನ್ನು ಸಹ ಹೊಂದಿರುವುದು ವಿಶೇಷವಾಗಿದೆ.

ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್

ಮಾರ್ಚ್ 2 ರಿಂದ, ಮರ್ಸಿಡಿಸ್-ಬೆನ್ಜ್ ತನ್ನ ಐಷಾರಾಮಿ MPV V-ಕ್ಲಾಸ್ ಅನ್ನು ಭಾರತದಲ್ಲಿ ಮತ್ತೊಮ್ಮೆ ಪರಿಚಯಿಸಿದೆ. ಇದನ್ನು ಕೂಡಾ 2022 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದು ಹಳೆಯ V-ಕ್ಲಾಸ್‌ನ ನವೀಕರಿಸಿದ ಆವೃತ್ತಿಯಾಗಿದೆ. 6-ಸೀಟ್‌ ಮತ್ತು 8-ಸೀಟ್‌ ಗಳಲ್ಲಿ ಲಭ್ಯವಿದೆ. ಪ್ರಪಂಚದಾದ್ಯಂತ V-ಕ್ಲಾಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಆದರೆ ಭಾರತಕ್ಕೆ ಅದರ ಎಂಜಿನ್ ಆಯ್ಕೆಗಳ ಬಗ್ಗೆ ಇನ್ನು ತಿಳಿದುಬಂದಿಲ್ಲ. ಇದು ಪ್ರೀಮಿಯಂ MPV ವಿಭಾಗದಲ್ಲಿ ಲೆಕ್ಸಸ್ LM, MG M9 ಮತ್ತು ಟೊಯೋಟಾ ವೆಲ್‌ಫೈರ್‌ನಂತಹ ಐಷಾರಾಮಿ ಕಾರುಗಳೊಂದಿಗೆ ಸ್ಪರ್ಧಿಸಲಿದೆ.

ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್

ಸ್ಕೋಡಾ ಕುಶಾಕ್ ಕೂಡಾ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಹೊಸ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್, ಪನೋರಮಿಕ್ ಸನ್‌ರೂಫ್ ಮತ್ತು ಆರಾಮದಾಯಕ ಹಿಂಭಾಗದ ಸೀಟುಗಳನ್ನು ಒಳಗೊಂಡಿರುತ್ತದೆ. ಇನ್ನು ಈ ಕಾರಿನಲ್ಲಿ 1.5 ಲೀಟರ್‌ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಟರ್ಬೊ ಎಂಜಿನ್7-ಸ್ಪೀಡ್ DCT ಇರಲಿದೆ. ಈ ಎರಡೂ ಪ್ರಸರಣಗಳು ಕ್ರಮವಾಗಿ 115 hp ಮತ್ತು 150 hp ಶಕ್ತಿ ಉತ್ಪಾದಿಸಬಲ್ಲವು.

ಇದನ್ನೂ ಓದಿ: ಓಲಾದಿಂದ ಹೋಳಿ ಮಹೋತ್ಸವ ಆಚರಣೆ: ಹೀರೋ ಸೂಪರ್‌ ಸ್ಪ್ಲೆಂಡರ್‌ಗಿಂತ ಅಗ್ಗವಾದ ರೋಡ್‌ಸ್ಟರ್‌ X

ಆಡಿ SQ8

ಐಷಾರಾಮಿ ಕಾರುಗಳಿಗೆ ಹೆಸರುವಾಸಿಯಾಗಿರುವ ಆಡಿ, SQ8 ಅನ್ನು ಇದೇ ಮಾರ್ಚ್‌ 17 ರಂದು ಪರಿಚಯಿಸಲಿದೆ. ಇದು ಸ್ಟ್ಯಾಂಡರ್ಡ್‌ ಮತ್ತು ಟಾಪ್‌ ಎಂಡ್‌ ಕಾರುಗಳ ನಡುವೆ ಇರುವ ಮಧ್ಯಮ ಕ್ರಮಾಂಕದ ಕಾರಾಗಿದೆ. 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಕಾರು 507 hp ಮತ್ತು 770 Nm ಟಾರ್ಕ್‌ ಉತ್ಪಾದಿಸುತ್ತದೆ. 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿ ನೀಡುತ್ತದೆ. ಇದು 4.1 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ತಲುಪುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಟೊಯೋಟಾ ಎಬೆಲ್ಲಾ

ಟೊಯೊಟಾದ ಇಲೆಕ್ಟ್ರಿಕ್‌ ಕಾರಾದ ಎಬೆಲ್ಲಾ ಮಾರ್ಚ್‌ನಲ್ಲಿ ತನ್ನ ಬೆಲೆ ನಿಗದಿಪಡಿಸಿಕೊಂಡು ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿದೆ. ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿರುವ ಈ ಕಾರು ಕ್ರಮವಾಗಿ 49 kWh ಮತ್ತು 61 kWh ನೊಂದಿಗೆ ಬರಲಿದೆ. ಈ ಎರಡೂ ಬ್ಯಾಟರಿಗಳು ಕ್ರಮವಾಗಿ 440 ಕಿಮೀ ಮತ್ತು 543 ಕಿಮೀ ಮೈಲೇಜ್‌ ಕೊಡಲಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories