ತಮಿಳುನಾಡು ರಾಜಕೀಯಕ್ಕೆ ಅಣ್ಣಾಮಲೈ : 2021ರ ಚುನಾವಣೆಯಲ್ಲಿ ಕರ್ನಾಟಕದ ಸಿಂಗಂ ಸ್ಪರ್ಧೆ ಖಚಿತ

0

ತಮಿಳುನಾಡು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪರಾಧಿಗಳಿಗೆ ನಡುಕ ಹುಟ್ಟಿಸುತ್ತಿದ್ದ ಕರ್ನಾಟಕದ ಸಿಂಗಂ ಇದೀಗ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ. ತನ್ನ ಹುಟ್ಟೂರಿನಿಂದಲೇ ರಾಜಕೀಯ ಪ್ರವೇಶ ಮಾಡುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಹೀಗಾಗಿ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.

ಸುಮಾರು 10 ವರ್ಷಗಳ ಕಾಲ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಹಲವು ಅಪರಾಧ ಕೃತ್ಯಗಳನ್ನು ಮಟ್ಟಹಾಕಿದ್ದಾರೆ. ವಿರೋಧಿಗಳಿಗೆ ನಡುಕವನ್ನು ಹುಟ್ಟಿಸುತ್ತಿದ್ದ ಅಣ್ಣಾಮಲೈ ಬೆಂಗಳೂರಿನಲ್ಲಿ ಡಿಸಿಪಿಯಾಗಿದ್ದ ವೇಳೆಯಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದರು.

ಅಣ್ಣಾಮಲೈ ರಾಜೀನಾಮೆಯ ಬೆನ್ನಲ್ಲೇ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಅಣ್ಣಾಮಲೈ ಎಲ್ಲವನ್ನೂ ಅಲೆಗಳೆದಿದ್ದರು. ಆದ್ರೀಗ ಅಣ್ಣಾಮಲೈ ಅವರು ಫೇಸ್ ಬುಕ್ ಲೈವ್ ನಲ್ಲಿ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ತಮಿಳುನಾಡಿನಲ್ಲಿ ವಾಸ್ತವ್ಯ ಹೂಡಿರುವ ಅಣ್ಣಾಮಲೈ ಅವರು ಚುನಾವಣೆಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ.

ಇನ್ನು ಮಿಸ್ ಯೂ ಕರ್ನಾಟಕ ಎಂದು ಮಾತು ಆರಂಭಿಸಿದ್ದ ಅಣ್ಣಾಮಲೈ ಅವರು ಕನ್ನಡಿಗರ ಪ್ರೀತಿಯನ್ನು ನೆನೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯ ಪೊಲೀಸ್ ಇಲಾಖೆಗೆ ರಾಜೀನಾಮೆಯನ್ನು ನೀಡಿದ್ದೇನೆ. ತನ್ನೂರಿನಿಂದಲೇ ರಾಜಕೀಯ ಕ್ಷೇತ್ರಕ್ಕೆ ಧುಮುಕಲಿದ್ದು, ಜನರ ಸೇವೆಯನ್ನು ಮಾಡಲಿದ್ದೇನೆ. ಕುಟುಂಬದೊಂದಿಗೆ ಕಾಲಕಳೆಯುವುದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳಲಿದ್ದೇನೆ. ರಾಜಕೀಯಕ್ಕೆ ಧುಮುಕುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ರಾಜಕೀಯ ಕಾರ್ಯ ಮಾಡಬೇಕಿದೆ ಎಂದು ಹೇಳಿದ್ದಾರೆ.

ದಕ್ಷ ಅಧಿಕಾರಿಯೆನಿಸಿಕೊಂಡಿದ್ದ ಅಣ್ಣಾಮಲೈ ರಾಜೀನಾಮೆ ನೀಡಿದಾಗ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಅಣ್ಣಾಮಲೈ 2019ರ ಮೇ 28ರಂದು ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆಯನ್ನು ಸಲ್ಲಸಿದ್ದರು. ಪತ್ರವ್ಯವಹಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ನಡೆದಿದ್ದರೂ ಕೂಡ ಕೇಂದ್ರ ಸರಕಾರ ಅವರ ರಾಜೀನಾಮೆಯನ್ನು ಅಂಗೀಕರಿಸಲು ಹಲವು ತಿಂಗಳುಗಳನ್ನು ತೆಗೆದುಕೊಂಡಿತ್ತು. ಕರ್ನಾಟಕದಲ್ಲಿ ಹಲವು ಘಟನೆಗಳು ನಡೆದಾಗಲೂ ಅಣ್ಣಾಮಲೈ ನೆನೆಪಿಗೆ ಬರುತ್ತಿದ್ದರು.

ಪೊಲೀಸ್ ಇಲಾಖೆಗೆ ರಾಜೀನಾಮೆಯನ್ನು ನೀಡಿದ ಮೇಲೆಯೂ ಅಣ್ಣಾಮಲೈ ಸೋಶಿಯಲ್ ಮೀಡಿಯಾದ ಮೂಲಕ ಜನರಿಗೆ ಹತ್ತಿರವಾಗಿದ್ದರು. ಯುವಜನರಿಗೆ ಸ್ಪೂರ್ತಿಯನ್ನು ತುಂಬಿವ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇದೀಗ ರಾಜಕೀಯ ಕ್ಷೇತ್ರಕ್ಕೆ ಮಾಜಿ ಪೊಲೀಸ್ ಅಧಿಕಾರಿ, ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರ ಎಂಟ್ರಿ ತೀವ್ರ ಕುತೂಹಲ ಮೂಡಿಸಿದೆ.

Leave A Reply

Your email address will not be published.