ಕೋವಿಡ್ ನಿಯಮ ಉಲ್ಲಂಘನೆ : ಮಾಸ್ಕ್ ಮರೆತ ಜನಪ್ರತಿನಿಧಿಗಳು

ಕುಂದಾಪುರ/ಬೆಳ್ತಂಗಡಿ : ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆಯಲ್ಲಿ ಕರಾವಳಿ ಭಾಗದ ಜನಪ್ರತಿನಿಧಿಗಳು ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಮತದಾನದ ಮಾಡುವ ವೇಳೆಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಹಾಗು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾಸ್ಕ್ ಮರೆತಿದ್ದಾರೆ.

ರಾಜ್ಯ ಸರಕಾರ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದೆ. ಕೊರೊನಾ ನಿಯಮಾವಳಿಗಳನ್ನು ಉಲ್ಲಂಘಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಅದ್ರಲ್ಲೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಮಾಸ್ಕ್ ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗಿದೆ. ಜನರು ಕೊರೊನಾ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿದ್ರೆ ಇತ್ತ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸಿದ್ದಾರೆ.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಮೂಡಮುಂದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಆದರೆ ಮತದಾನದ ವೇಳೆಯಲ್ಲಿ ಶಾಸಕರು ಮಾಸ್ಕ್ ಧರಿಸಿಲ್ಲ. ಶಾಸಕರಷ್ಟೇ ಅಲ್ಲಾ ಮತಗಟ್ಟೆಯಲ್ಲಿನ ಹಲವು ಅಧಿಕಾರಿಗಳು ಕೂಡ ಕೊರೊನಾ ನಿಯಮಾವಳಿಗಳನ್ನು ಪಾಲನೆ ಮಾಡದಿರೋದು ಕಂಡುಬಂದಿದೆ.

ಇನ್ನು ಬೆಳ್ತಂಗಡಿ ತಾಲೂಕಿನ ಮತಗಟ್ಟೆಯೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಮತದಾನ ಮಾಡಿದ್ದಾರೆ. ಮತದಾನದ ವೇಳೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದವು ಮಾಸ್ಕ್ ಧರಿಸಿದ್ದರೂ ಕೂಡ ವಿಧಾನ ಪರಿಷತ್ ಸದಸ್ಯರು ಮಾಸ್ಕ್ ಧರಿಸದಿರೋದು ಕಂಡು ಬಂದಿದೆ.

ಕೊರೊನಾ ನಿಯಮ ಉಲ್ಲಂಘನೆ ಮಾಡುವ ಜನ ಸಾಮಾನ್ಯರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರಕಾರ ಹಾಗೂ ಜಿಲ್ಲಾಡಳಿತಗಳು ಇದೀಗ ಜನಪ್ರತಿನಿಧಿಗಳ ವಿರುದ್ದವೂ ಕ್ರಮಕೈಗೊಳ್ಳಲಿ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Comments are closed.