ಗ್ರೀನ್ ಝೋನ್ ಉಡುಪಿಗೆ ಬರಲಿದ್ದಾರೆ 20,000 ಮಂದಿ : ಶುರುವಾಯ್ತು ಕೊರೊನಾತಂಕ, ಕ್ವಾರಂಟೈನ್ ಕಡ್ಡಾಯ !

0

ಉಡುಪಿ : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ್ದ ಉಡುಪಿ ಕೊರೊನಾ ಮುಕ್ತವಾಗಿದೆ. ಮಾತ್ರವಲ್ಲ ಗ್ರೀನ್ ಝೋನ್ ವ್ಯಾಪ್ತಿಗೂ ಒಳಪಟ್ಟಿದೆ. ಆದ್ರೀಗ ಗ್ರೀನ್ ಝೋನ್ ನಲ್ಲಿರುವ ಉಡುಪಿಗೆ ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರೋಬ್ಬರಿ 20,000 ಮಂದಿ ಆಗಮಿಸಲಿದ್ದಾರೆ. ಇದರಿಂದಾಗಿ ಕೊರೊನಾ ಆತಂಕ ಶುರುವಾಗಿದೆ.

ಮೊದಲ ಹಂತದಲ್ಲಿ ಹೊರ ರಾಜ್ಯಗಳಿಂದ ಉಡುಪಿಗೆ ಬರಲು ಮೊದಲ ಹಂತದಲ್ಲಿ 6,000 ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಹೊರ ರಾಜ್ಯ ಹಾಗೂ ವಿದೇಶಗಳಿಂದ ಇನ್ನೊಂದು ವಾರದ ಒಳಗೆ ಉಡುಪಿ ಜಿಲ್ಲೆಗೆ ಬರೋಬ್ಬರಿ 20,000 ಮಂದಿ ಆಗಮಿಸಲಿದ್ದಾರೆ. ಹೀಗೆ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದ್ದಾರೆ.

ದೇಶ, ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಜಿಲ್ಲೆಗೆ ಆಗಮಿಸುತ್ತಿರೋದು ಜಿಲ್ಲಾಡಳಿತಕ್ಕೂ ತಲೆನೋವು ತರಿಸಿದೆ. ಬರೋಬ್ಬರಿ 20,000 ಮಂದಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸೋದು ಸವಾಲಿನ ಕೆಲಸವೇ ಸರಿ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯಕ್ರಮಗಳನ್ನು ಕೈಗೊಂಡಿದೆ.

ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ. ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ ಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ತಕ್ಷಣದಿಂದಲೇ ಜಿಲ್ಲಾಡಳಿತಕ್ಕೆ ಬಿಟ್ಟುಕೊಡುವಂತೆ ಸೂಚನೆಯನ್ನು ನೀಡಲಾಗಿದೆ.

ಇನ್ನು ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲು ಯಾರೂ ಕೂಡ ವಿರೋಧ ವ್ಯಕ್ತಪಡಿಸುವಂತಿಲ್ಲ. ಯಾರಾದ್ರೂ ಅಡ್ಡಿಪಡಿಸಿದ್ರೆ ಅಂತವರ ವಿರುದ್ದ ಸೆಕ್ಷನ್ 188, 269, 270ರ ಪ್ರಕರಾರ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕ್ವಾರಂಟೈನ್ ಕೇಂದ್ರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಗ್ರಾಮ ಪಂಚಾಯತ್ ಗಳ ಮೂಲಕ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ, ಪೊಲೀಸ್ ಸಿಬ್ಬಂಧಿಯನ್ನು ನಿಯೋಜನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದ್ದಾರೆ.

ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರೋದ್ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ಶಾಲಾ, ಕಾಲೇಜುಗಳ ಮುಖ್ಯಸ್ಥರ ಜೊತಗೆ ಸಭೆ ನಡೆಸಿದ್ದಾರೆ. ಅಲ್ಲದೇ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಎಸಿ ರಾಜು, ಡಿಎಚ್ ಒ ಡಾ.ಸುಧೀರ್ ಚಂದ್ರ ಚೂಡಾ, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.

Leave A Reply

Your email address will not be published.