ಹಾಜರಾತಿ ಇಲ್ಲದಿದ್ದರೂ ಅಂತಿಮ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ..!

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಾರಂಭ ತಡವಾಗಿದೆ. ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭವಾಗಿದ್ದರೂ ಕೂಡ ವಿದ್ಯಾರ್ಥಿಗಳು ಮಾತ್ರ ಶಾಲೆ, ಕಾಲೇಜುಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವಲ್ಲೇ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಡಲು ಮುಂದಾಗಿದೆ.

ಎಸ್ಎಸ್ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೋಮಾ ಕೋರ್ಸ್ ಸೇರಿದಂತೆ ಎಲ್ಲಾ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿಯಿಂದ ವಿನಾಯಿತಿಯನ್ನು ನೀಡಲಾಗಿದ್ದು, ಇದೀಗ ಕನಿಷ್ಠ ಹಾಜರಾತಿ ಹೊಂದಿಲ್ಲದ ವಿದ್ಯಾರ್ಥಿಗಳಿಗೂ ಕೂಡ ಅಂತಿಮ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ರೂಪಿಸಿದೆ.

ಶಾಲೆ, ಕಾಲೇಜುಗಳು ಆರಂಭಗೊಂಡಿದ್ದರೂ ಕೂಡ ವಿದ್ಯಾರ್ಥಿಗಳಿಗೆ ತರಗತಿಯಲ್ಲಿನ ಶಿಕ್ಷಣದ ಜೊತೆಗೆ ಆನ್ ಲೈನ್ ತರಗತಿಗಳ ಮೂಲಕವೂ ಕಲಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಶಾಲೆ, ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗಲು ಪೋಷಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ನೀಡಲೇ ಬೇಕಾಗಿದೆ. ಅಲ್ಲದೇ ಕಡ್ಡಾಯ ಹಾಜರಾತಿಯಿಂದಲೂ ವಿನಾಯಿತಿಯನ್ನು ನೀಡಲಾಗಿದೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಕನಿಷ್ಠ ಶೇ.70ರಷ್ಟು ಹಾಗೂ ಹಾಜರಾತಿನ್ನು ಹೊಂದಿರಲೇ ಬೇಕೆಂಬ ನಿಯಮವಿದೆ. ಆದರೆ ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಬಾರಿ ಕಡ್ಡಾಯ ಹಾಜರಾತಿಯಿಂದ ವಿನಾಯಿತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎನ್ನಲಾಗುತ್ತಿದೆ.

Comments are closed.