Heavy Rain : ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ, KRS ಡ್ಯಾಂ ಸಂಪೂರ್ಣ ಭರ್ತಿ

ಮೈಸೂರು : ಅರಮನೆ ನಗರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rain) ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ನಂದಿ ಮಾರ್ಗದ ರಸ್ತೆಯುದ್ದಕ್ಕೂ ಭೂ ಕುಸಿತ ಉಂಟಾಗುತ್ತಿದ್ದು, ರಸ್ತೆಗಳು ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಇನ್ನೊಂದೆಡೆಯಲ್ಲಿ ಕೆಆರ್‌ಎಸ್‌ ಡ್ಯಾಂ ( KRS DAM) ಭರ್ತಿಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಕಳೆದ ಎರಡು ದಿನಗಳಿಂದಲೂ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ದಲ್ಲಿ ಇದೀಗ ಒಂದೇ ತಿಂಗಳಲ್ಲಿ ನಾಲ್ಕನೇ ಬಾರಿಗೆ ಭೂ ಕುಸಿತ ಉಂಟಾಗಿದೆ. ಮಳೆ ಇದೇ ರೀತಿಯಾಗಿ ಮುಂದುವರಿದ್ರೆ ಚಾಮುಂಡಿ ಘಾಟ್‌ ಮಾರ್ಗದ ರಸ್ತೆಯೇ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.

ಮೈಸೂರಿನಲ್ಲಿ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಈಗಾಗಲೇ ಈ ಹಿಂದೆಯೇ ಮೂರು ಬಾರಿ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿತ್ತು. ಇದೀಗ ಮತ್ತೊಂದು ಬಾರಿ ಕುಸಿತವಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆಯಿದ್ದು, ಚಾಮುಂಡಿ ಬೆಟ್ಟದಲ್ಲೀಗ ಆತಂಕ ಶುರುವಾಗಿದೆ. ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲೀಗ ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗವನ್ನು ಬಂದ್‌ ಮಾಡಲಾಗಿದೆ. ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಕೆಆರ್‌ಎಸ್‌ ಡ್ಯಾಂ ಸಂಪೂರ್ಣ ಭರ್ತಿ : ಕಾವೇರಿ ನದಿಗೆ ಇಳಿಯದಂತೆ ಎಚ್ಚರಿಕೆ

ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿದೆ. ಕೆಆರ್‌ಎಸ್‌ ಡ್ಯಾಂನ ಹೊರ ಹರಿವು ಹೆಚ್ಚಳವಾಗಿದ್ದು, ನಿಮಿಷಾಂಭಾ ದೇಗುಲದ ಸ್ನಾನಘಟ್ಟದಲ್ಲಿ ಭಕ್ತರು ಸ್ನಾನ ಮಾಡುವುದಕ್ಕೆ ನಿಷೇಧವನ್ನು ಹೇರಲಾಗಿದೆ. ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್‌ ಅಳವಡಿಕೆ ಮಾಡಲಾಗಿದ್ದು, ನದಿ ದಂಡೆಗೆ ತೆರಳದಂತೆ ಮುನ್ಸೂಚನೆಯನ್ನು ನೀಡಲಾಗಿದೆ.

( Heavy Rain Mysore Land fall again at Chamundi Hill, KRS Dam full)

Comments are closed.