ಗಂಡನಿಗೆ ಕಡಿಮೆಯಾಯ್ತು ಮೀನಿನ ಸಾರು : ಮನನೊಂದ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ

ಪಾಟ್ನಾ : ಊಟ ಹೊತ್ತಲ್ಲಿ ಪತಿಗೆ ಮೀನು ಸಾರು ಕಡಿಮೆಯಾಯ್ತು ಅಂತಾ ಮನನೊಂದ ಪತ್ನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಬಾಗಲ್ಪುರದಲ್ಲಿ ನಡೆದಿದೆ.

ಸಾರಾದೇವಿ (30 ವರ್ಷ) ಎಂಬಾಕೆಯೇ ಸಾವನ್ನಪ್ಪಿದ ದುರ್ದೈವಿ. ಸಾರಾದೇವಿಯ ಪತಿ ಕುಂದನ್ ಮಂಡಲ್ ಸಾಂಬಾರ್ ಮಾಡೋದಕ್ಕೆ ಮಾರುಕಟ್ಟೆಯಿಂದ 300 ರೂಪಾಯಿ ಕೊಟ್ಟು ಮೀನನ್ನು ತಂದಿದ್ದರು. ಮೀನಿನ ಸಾಂಬಾರ್ ರುಚಿಕರವಾಗಿದ್ದರಿಂದಾಗಿ ಪತ್ನಿ ಹಾಗೂ ಮಕ್ಕಳು ಬೇಗನೆ ಊಟ ಮಾಡಿದ್ದರು. ಆದರೆ ಪತಿಗೆ ಕಡಿಮೆ ಸಾಂಬಾರ್ ಉಳಿದಿತ್ತು.

ಹೀಗಾಗಿ ಊಟದ ಹೊತ್ತಲ್ಲಿ ಪತ್ನಿ ಪತಿಗೆ ಸಾಂಬರ್ ಉಳಿಯಲಿಲ್ಲಾ ಅಂತಾ ಬೇಸರ ಮಾಡಿಕೊಂಡಿದ್ದಾಳೆ. ಪತಿ ಕುಂದನ್ ಮಂಡಲ್ ಸಂಜೆ ಮೀನು ತಂದು ಸಾರು ಮಾಡೋಣಾ ಅಂತಾ ಹೇಳಿದ್ದರಂತೆ. ಅಲ್ಲದೇ ಮೀನು ಸಾಂಬಾರ್ ಕಡಿಮೆ ಇರೋದ್ರಿಂದಾಗಿ ಊಟ ಮಾಡದೆ ಹೊರಗಡೆ ಹೋಗಿದ್ದಾರೆ.

ಪತಿ ಮನೆಯಿಂದ ಹೊರ ಹೋಗುತ್ತಿದ್ದಂತೆಯೇ ಪತ್ನಿ ಸಾರಾದೇವಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರ ನೆರವಿನಿಂದ ಮಹಿಳೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.