Commonwealth Games Cricket : ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಭಾರತೀಯ ವನಿತೆಯರು

ಬರ್ಮಿಂಗ್’ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದೆ. ಇದೇ ಮೊದಲ ಬಾರಿ ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾ, ಮೊದಲ ಪ್ರಯತ್ನದಲ್ಲೇ ಫೈನಲ್’ಗೆ ಲಗ್ಗೆ ಇಟ್ಟಿದೆ (India Women Cricket Team Enters Final in Commonwealth Games-2022).

ಬರ್ಮಿಂಗ್’ಹ್ಯಾಮ್’ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡ, ಆತಿಥೇಯ ಇಂಗ್ಲೆಂಡ್ ತಂಡವನ್ನು 4 ರನ್’ಗಳಿಂದ ರೋಚಕವಾಗಿ ಮಣಿಸಿತು. ಗೆಲ್ಲಲು ಕೊನೆಯ ಓವರ್’ನಲ್ಲಿ 14 ರನ್’ಗಳ ಗುರಿ ಪಡೆದಿದ್ದ ಇಂಗ್ಲೆಂಡ್ 9 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು. ಭಾರತ ಪರ ಸ್ಟಾರ್ ಎಡಗೈ ಓಪನರ್ ಸ್ಮೃತಿ ಮಂಧಾನ (Smriti Mandhana) ಕೇವಲ 32 ಎಸೆತಗಳಲ್ಲಿ 61 ರನ್ ಸಿಡಿಸಿ ಅಬ್ಬರಿಸಿದರು. ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ (15) ಮೊದಲ ವಿಕೆಟ್’ಗೆ ಕೇವಲ 7.5 ಓವರ್’ಗಳಲ್ಲಿ 76 ರನ್ ಸೇರಿಸಿ ಭಾರತದ ಇನ್ನಿಂಗ್ಸ್’ಗೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮಂಧಾನ ಇನ್ನಿಂಗ್ಸ್’ನಲ್ಲಿ 8 ಆಕರ್ಷಕ ಬೌಂಡರಿಗಳು ಮತ್ತು 3 ಸಿಡಿಲ ಸಿಕ್ಸರ್’ಗಳು ಇದ್ದವು. ಮಧ್ಯಮ ಕ್ರಮಾಂಕದಲ್ಲಿ ಮಂಗಳೂರು ಮೂಲದ ಮುಂಬೈ ಆಟಗಾರ್ತಿ ಜೆಮಿಮಾ ರಾಡ್ರಿಗ್ಸ್ (Jemimah Radrigues) 31 ಎಸೆತಗಳಲ್ಲಿ 7 ಬೌಂಡರಿಗಳನ್ನೊಳಗೊಂಡ ಅಜೇಯ 44 ರನ್ ಗಳಿಸಿ ಭಾರತ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.

165 ರನ್’ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ತವರು ನೆಲದಲ್ಲೇ ಆಘಾತಕಾರಿ ಸೋಲು ಅನುಭವಿಸಿತು. ಭಾರತ ಪರ ಉತ್ತ ಬೌಲಿಂಗ್ ದಾಳಿ ಸಂಘಟಿಸಿದ ಆಫ್’ಸ್ಪಿನ್ನರ್’ಗಳಾದ ದೀಪ್ತಿ ಶರ್ಮಾ (4-0-18-1) ಮತ್ತು ಸ್ನೇಹ್ ರಾಣಾ (4-0-28-2) ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೀಲ್ಡಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತೀಯ ವನಿತೆಯರು ಇಂಗ್ಲೆಂಡ್ ತಂಡದ ನಾಯಕಿ ನೆಥಾಲಿ ಶಿವರ್ (41 ರನ್) ಸೇರಿದಂತೆ ಮೂವರನ್ನು ರನೌಟ್ ಮಾಡಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Rahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್ ಕ್ಲಬ್ ? ಪುತ್ರನ ಭವಿಷ್ಯಕ್ಕಾಗಿ ಈ ಅಚ್ಚರಿಯ ನಿರ್ಧಾರ

ಇದನ್ನೂ ಓದಿ : Pro Kabaddi League Auction ಪ್ರೊ ಕಬಡ್ಡಿ ಲೀಗ್: 2.26 ಕೋಟಿಗೆ ಸೇಲ್ ಆಗಿ ದಾಖಲೆ ಬರೆದ ಬೆಂಗಳೂರಿನ “ಮಾಜಿ ಬುಲ್” ಪವನ್ ಸೆಹ್ರಾವತ್

India Women Cricket Team Enters Final in Commonwealth Games-2022

Comments are closed.