ಸಂಪುಟ ವಿಸ್ತರಣೆಯೋ….? ಪುನರ್ ರಚನೆಯೋ…? ಚೆಂಡು ಹೈಕಮಾಂಡ್ ಅಂಗಳದಲ್ಲಿ…!!

ಬೆಂಗಳೂರು: ಎರಡು ಉಪಚುನಾವಣೆ ಗೆದ್ದು ಬೀಗುತ್ತಿರುವ ಸಿಎಂ ಬಿಎಸ್ವೈ ನಾಯಕತ್ವ ಬದಲಾವಣೆಯ ಊಹಾಪೋಹ ಎಬ್ಬಿಸಿದ್ದ ಪಕ್ಷದ ಒಳಗಿನ ಹಾಗೂ ಹೊರಗಿನ ಶತ್ರುಗಳಿಗೆ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಆದರೆ ಸಿಎಂಗೆ ಸಂಪುಟ ವಿಸ್ತರಣೆಯ ಬಿಸಿತುಪ್ಪ ಎದುರಾಗಿದ್ದು, ಆಕಾಂಕ್ಷಿಗಳ ಪಟ್ಟಿ ಹೊತ್ತು ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ  ಸದಾ ಒಂದಿಲ್ಲೊಂದು ಅಡ್ಡಿ ಆತಂಕಗಳು ಎದುರಾಗುತ್ತಲೇ ಇತ್ತು. ಸಧ್ಯ ಎಲ್ಲ ಅಡೆ-ತಡೆಗಳನ್ನು ಗೆದ್ದ ಸಿಎಂ ಬಿಎಸ್ವೈ ಸಚಿವ ಸ್ಥಾನದ ಆಕಾಂಕ್ಷಿತರ ಪಟ್ಟಿ ಹೊತ್ತು ಬುಧವಾರ ದೆಹಲಿಗೆ ತೆರಳಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬ ಗೊಂದಲ ಮೂಡಿದ್ದು, ಇದಕ್ಕೆ ಸಿಎಂ ಬಿಎಸ್ವೈ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದು, ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಲಿದೆಯೋ ಅಥವಾ ವಿಸ್ತರಣೆಯಾಗಲಿದೆಯೋ ಎಂಬುದು ನನ್ನ ಕೈಯಲ್ಲಿಲ್ಲ. ಹೈಕಮಾಂಡ್ ಭೇಟಿ ಬಳಿಕ ಎಲ್ಲವೂ ನಿರ್ಧಾರವಾಗಲಿದೆ ಎನ್ನುವ ಮೂಲಕ ಹಲವು ಸಚಿವರ ಎದೆಯಲ್ಲಿ ನಡುಕ ಮೂಡಿಸಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ರಾಜ್ಯ ಸಚಿವ ಸಂಪುಟದಲ್ಲಿ 7 ಸಚಿವ ಸ್ಥಾನಗಳ ನೇಮಕಕ್ಕೆ ಅವಕಾಶವಿದೆ. ಆದರೆ ಪ್ರಬಲ ಆಕಾಂಕ್ಷಿಗಳ ಪಟ್ಟಿಯೇ 12 ರ ಮೇಲಿದೆ. ಹೀಗಾಗಿ ಕೆಲವರ ಸಚಿವ ಸ್ಥಾನ ಕಸಿದು ಅತೃಪ್ತರ ಮನವೊಲಿಸಲಾಗುತ್ತದೆ ಎನ್ನಲಾಗಿದೆ. ಆದರೆ ಇವೆಲ್ಲವೂ ಸಿಎಂ ಬಿಎಸ್ವೈ ಹೈಕಮಾಂಡ್ ಭೇಟಿ ಬಳಿಕವೇ ಬಹಿರಂಗವಾಗಲಿದೆ.

ಇನ್ನು ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿರುವ ಹಾಗೂ ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಸಿಎಂ ದೆಹಲಿಗೆ ತೆರಳುವ ಮುನ್ನ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಲ್ಲದೇ ಸಚಿವ ಸ್ಥಾನದ ಆಕಾಂಕ್ಷಿಗಳೇ ದಂಡೇ ಸಿಎಂ ನಿವಾಸಕ್ಕೆ ಪರೇಡ್ ನಡೆಸಿದೆ.

ಈ ಮಧ್ಯೆ ಕೃಷಿ ಸಚಿವ ಬಿ.ಸಿ.ಪಾಟೀಲ್ ರಿಗೆ ಸಚಿವ ಸ್ಥಾನದಿಂದ ಖೋಕ್ ನೀಡಲಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಅವರೂ ಕೂಡ ಸಿಎಂ ಬಿಸ್ವೈ ದೆಹಲಿಗೆ ತೆರಳುವ ಮುನ್ನವೇ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೋನಾ ಸಂಕಷ್ಟದ ನಡುವೆಯೂ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲರ ಚಿತ್ತ ಬಿಜೆಪಿ ಹೈಕಮಾಂಡ್ ನತ್ತ ನೆಟ್ಟಿದೆ. ಅಷ್ಟೇ ಅಲ್ಲ ಸಚಿವ ಸಂಪುಟ ವಿಸ್ತರಣೆಯಾದರೂ, ಪುನರ್ ರಚನೆಯಾದರೂ ಅತೃಪ್ತಿಯ ಕೂಗು.ಅಸಮಧಾನ ಮುಗಿಯುವ ಲಕ್ಷಣವಿಲ್ಲ.

Comments are closed.