ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಚಾಟಿ…! ಉಚ್ಛನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿ…!!

ನೀ ಕೊಡೆ ನಾ ಬಿಡೆ ಎಂಬಂತಿದ್ದ  ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರ ಕೊನೆಗೂ ಹೈಕೋರ್ಟ್ ಚಾಟಿ ಏಟಿನ ಬಳಿಕ ಕೊನೆಗೊಂಡಿದ್ದು, ಬುಧವಾರದಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಗಳು ರಸ್ತೆಗಿಳಿದಿವೆ.

ಕಳೆದ 13 ದಿನಗಳಿಂದ ರಾಜ್ಯದ ಸಾರಿಗೆ ಇಲಾಖೆಯ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು ವೇತನ ಪರಿಷ್ಕರಣೆ ಹಾಗೂ 6 ನೇ ವೇತನ ಆಯೋಗ ಜಾರಿ ಬೇಡಿಕೆ ಮುಂದಿಟ್ಟು ಮುಷ್ಕರ ಆರಂಭಿಸಿದ್ದರು. ಹೀಗಾಗಿ ರಾಜ್ಯದ ಎಲ್ಲೆಡೆ ಬಸ್ ಸಂಚಾರ ಸ್ಥಗಿತಗೊಂಡಿತ್ತು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಮುಷ್ಕರಕ್ಕೆ ಸೊಪ್ಪು ಹಾಕದ ಸರ್ಕಾರ, ಒಂದು ತಿಂಗಳು ಮುಷ್ಕರ ನಡೆಸಿದರೂ ಬೇಡಿಕೆ ಈಡೇರಿಸುವ ಪ್ರಶ್ನೆಯೇ ಇಲ್ಲ ಎಂದಿದ್ದರು.  ತಟ್ಟೆ ಲೋಟ ಬಡಿಯುವುದು, ಭೀಕ್ಷೆ ಬೇಡುವುದು ಸೇರಿದಂತೆ ವಿಧ-ವಿಧವಾಗಿ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿರಲಿಲ್ಲ.

ಸಾರ್ವಜನಿಕರು ಕೋವಿಡ್ ನಂತರ ತುರ್ತು ಪರಿಸ್ಥಿತಿಯಲ್ಲೂ ಪ್ರತಿಭಟನೆ, ಮುಷ್ಕರಕ್ಕೆ ಮುಂದಾದ ಸಾರಿಗೆ ಇಲಾಖೆ ನೌಕರರ ವಿರುದ್ಧ ಮುನಿಸಿಕೊಂಡಿದ್ದರು. ಕೆಲವೆಡೆ ಕೆಲ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ ಮುಷ್ಕರಕ್ಕೆ ಸೆಡ್ಡು ಹೊಡೆದಿದ್ದರು.

ಈ ಮಧ್ಯೆ ಸಾರಿಗೆ ನೌಕರರಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮುಷ್ಕರದ ಸಮಯ ಇದಲ್ಲ ಎಂದಿದ್ದ ಹೈಕೋರ್ಟ್, ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಬೆಂಗಳೂರಿನಲ್ಲೇ ಅಂದಾಜು 6314 ಬಸ್ ಗಳು ಈಗಾಗಲೇ ಸಂಚಾರ ಆರಂಭಿಸಿವೆ.

Comments are closed.