ಕಾಂಗ್ರೆಸ್ ಗೆ ಬಿಗ್ ಶಾಕ್….! ಸಕ್ರಿಯ ರಾಜಕೀಯದಿಂದ ಹಿಂದೆ ಸರಿದ ರಮೇಶ್ ಕುಮಾರ್…!!

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ರಮೇಶ್ ಕುಮಾರ್ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ಕೋಲಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಅಚ್ಚರಿಯ ನಿರ್ಧಾರ ಪ್ರಕಟಿಸಿದ ರಮೇಶ್ ಕುಮಾರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತನಾಗುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಮೌಲ್ಯ ಉಳಿದಿಲ್ಲ. ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ರಾಜಕೀಯದಲ್ಲಿ ಇಷ್ಟು ವರ್ಷ ನಾನು ನ್ಯಾಯಯುತವಾಗಿ ಬದುಕಿದ್ದೇನೆ. ಯಾರಿಂದಲೂ ಹಣ ತೆಗೆದುಕೊಂಡು ರಾಜಕೀಯ ಮಾಡಿಲ್ಲ. ನನ್ನ ತತ್ವಗಳಿಗೆ ನಿಷ್ಟನಾಗಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ರಮೇಶ್ ಕುಮಾರ್ ಘೋಷಿಸಿದ್ದಾರೆ.

ಅಧಿಕಾರಕ್ಕಾಗಿ ಪಕ್ಷ ತೊರೆದವರ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಕುಮಾರ್, ಪಕ್ಷದ ಕೆಲವರು ಹಣಕ್ಕಾಗಿ ತಲೆ‌ ಮಾರಿಕೊಂಡರು. ಪಕ್ಷ ತೊರೆದು ಬಿಜೆಪಿ ಸೇರಿದರು. ಆದರೇ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಪಕ್ಷಕ್ಕೆ ನಿಷ್ಠರಾಗಿರುವಂತೆ ಮನವಿ ಮಾಡಿದ ರಮೇಶ್ ಕುಮಾರ್, ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಇಂಥ ಸಂದರ್ಭದಲ್ಲಿ ನೀವು ಪಕ್ಷಕ್ಕೆ ದ್ರೋಹ ಮಾಡಿದರೇ ಪಕ್ಷದ ಜೊತೆ ನಾವು ನಾಶವಾಗಿ ಹೋಗುತ್ತೇವೆ. ಹೀಗಾಗಿ ಅಧಿಕಾರ,ಹಣದ ಆಸೆಗಾಗಿ ವಿಪಕ್ಷದ ಜೊತೆ ಕೈಜೋಡಿಸಬೇಡಿ ಎಂದಿದ್ದಾರೆ.ಕೇವಲ ಚುನಾವಣೆ ರಾಜಕೀಯದಿಂದ ದೂರ ಸರಿಯುತ್ತಿರುವುದಾಗಿ ಪ್ರಕಟಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಗ್ರಾ.ಪಂ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಲು ಪ್ರಾಮಾಣಿಕವಾಗಿ ದುಡಿಯುವುದಾಗಿ ಹೇಳಿದ್ದಾರೆ.

ಆದರೆ ದೀಢೀರ್ ರಮೇಶ್ ಕುಮಾರ್ ಈ ಘೋಷಣೆ ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದೆ. ಮೂಲಗಳ ಪ್ರಕಾರ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ವರ್ಚಸ್ಸು ಹಾಗೂ ಪ್ರಭಾವ ಕಡಿಮೆಯಾಗಿದ್ದು ಇನ್ಮುಂದೆ ಕಾಂಗ್ರೆಸ್ಸಿಂದ ಚುನಾವಣೆ ಗೆಲ್ಲೋದೆ ಕಷ್ಟ ಎಂಬ ತೀರ್ಮಾನಕ್ಕೆ ಬಂದಿರುವ ರಮೇಶ್ ಕುಮಾರ್ ಸೋಲಿನ ಬಳಿಕ ರಾಜಕಾರಣ ಬಿಡುವ ಬದಲು ಗೌರವದಿಂದ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚಿಗಷ್ಟೇ ಇವಿಎಂ ಕುರಿತಾಗಿನ ಹೇಳಿಕೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳ ವಿರುದ್ಧ ಮಾತನಾಡಿದ್ದ ರಮೇಶ್ ಕುಮಾರ್ ಇವಿಎಂ ಮೇಲಿನ ಅಪನಂಬಿಕೆ ಸರಿಯಲ್ಲ. ನಾನು ಚುನಾವಣೆ ಗೆದ್ದಿದ್ದೇನೆ. ನನಗೆ ವಿಶ್ವಾಸವಿದೆ. ಜನರಿಗೆ ಕಾಂಗ್ರೆಸ್ ಬೇಡವಾಗಿದೆ ಅಷ್ಟೇ ಎಂದಿದ್ದರು.ಇದರ ಬೆನ್ನಲ್ಲೇ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ವೈಯಕ್ತಿಕ ಘನತೆ ಹಾಗೂ ಗೌರವ ಉಳಿಸಿಕೊಳ್ಳುವ ಪ್ರಯತ್ನ ಎನ್ನಲಾಗುತ್ತಿದೆ.

Comments are closed.