ಸಿಸಿಬಿ ಪೋಲಿಸರ ಎಣ್ಣೆ ಪಾರ್ಟಿ : 8 ಪೊಲೀಸರ ವಿರುದ್ದ ಶಿಸ್ತು ಕ್ರಮಕ್ಕೆ ಕಮಿಷನರ್ ಆದೇಶ, ವರ್ಗಾವಣೆ

ಮಂಗಳೂರು : ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ ಪ್ರಕರಣದ ವಿರುದ್ದ ಮಂಗಳೂರು ಪೋಲಿಸ್ ಆಯುಕ್ತರಾದ ಶಶಿಕುಮಾರ್ ಅವರು ಶಿಸ್ತುಕ್ರಮ ಕೈಗೊಂಡಿದ್ದು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.
ಬಾರ್ ವೊಂದರಲ್ಲಿ ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿಂತೆ ಹೆಚ್ಚುವರಿ ಇಲಾಖಾ ತನಿಖೆ ಕೈಗೊಂಡು ವಿಚಾರಣಾ ವರದಿ ನೀಡುವಂತೆ ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಪೊಲೀಸ್ ಆಯುಕ್ತರು ಸೂಚಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಎಂಟು ಮಂದಿ ಸಿಬಂದಿಯನ್ನು ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ವರ್ಗಾಯಿಸಿ ಆದೇಶ ಮಾಡಿದ್ದಾರೆ.
ಪ್ರಕರಣದಲ್ಲಿ ಎಎಸ್ಐಗಳು, ಐದು ಹೆಡ್ ಕಾನ್ಸ್ ಟೇಬಲ್ ಗಳಿದ್ದು ಅವರನ್ನು ಕೊಣಾಜೆ, ಬಜ್ಪೆ, ಕಂಕನಾಡಿ ನಗರ, ಪಾಂಡೇಶ್ವರ, ಬಂದರು, ಉರ್ವ ಮತ್ತು ಬರ್ಕೆ ಠಾಣೆಗಳಿಗೆ ವರ್ಗಾಯಿಸಿ ಆದೇಶ ಮಾಡಲಾಗಿದೆ. ಇಂದಿನಿಂದಲೇ ನಿಯೋಜಿಸಿದ ಠಾಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ನಮ್ಮ ಪ್ರಯತ್ನದ ನಡುವೆ ಈ ರೀತಿಯ ಘಟನೆ ನಡೆದಿರುವುದು ಪೊಲೀಸರ ಘನತೆಗೆ ಕುಂದು ತಂದಿದೆ. ಕರ್ತವ್ಯದ ಸಮಯದಲ್ಲಿ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯ ಜೊತೆಗೆ ಜೊತೆಗೆ ಕುಳಿತು ಟೇಬಲ್ ಹಂಚಿಕೊಂಡಿದ್ದು ತಪ್ಪೆಂದು ಪರಿಗಣಿಸಲಾಗಿದೆ. ಹೀಗಾಗಿ ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಹೇಳಿದ್ದಾರೆ.



