ಮೇ 3ರ ನಂತರವೂ ಮುಂದುವರಿಯುತ್ತಾ ಲಾಕ್ ಡೌನ್ ? ನಾಳೆ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಮೋದಿ ಸಭೆ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಎರಡನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಮೇ 3ಕ್ಕೆ ಎರಡನೇ ಹಂತದ ಲಾಕ್ ಡೌನ್ ಆದೇಶ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹಲವು ಜಿಲ್ಲೆಗಳನ್ನು ರೆಡ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಆದೇಶ ಮುಂದುವರಿಸಬೇಕೇ ?

ಇಲ್ಲವೇ ಲಾಕ್ ಡೌನ್ ಆದೇಶವನ್ನು ವಾಪಾಸ್ ಪಡೆಯಬೇಕೆ ಅನ್ನುವ ಕುರಿತು ನಾಳೆ ಪ್ರಧಾನಿ ನರೇಂದ್ರ ಮೋದಿ ವಿವಿಧ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಸಭೆ ನಡೆಸಲಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶದಿಂದಾಗಿರುವ ಸ್ಥಿತಿಗತಿ, ಕೊರೊನಾ ವೈರಸ್ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮೋದಿ ಚರ್ಚೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವರು ಹಾಗೂ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿಗಳನ್ನು ಪಡೆಯಲಿದ್ದಾರೆ.

ಕಳೆದ ಬಾರಿ ಕರ್ನಾಟಕ ಸೇರಿ ಹಲವು ರಾಜ್ಯಗಳು ಲಾಕ್ ಡೌನ್ ಆದೇಶ ಮುಂದುವರಿಸೋದಕ್ಕೆ ಒಪ್ಪಿಗೆ ಸೂಚಿಸಿದ್ದವು. ನಾಳೆ ನಡೆಯುವ ಸಭೆಯಲ್ಲಿ ಯಾವೆಲ್ಲಾ ರಾಜ್ಯಗಳು ಲಾಕ್ ಡೌನ್ ಆದೇಶ ಮುಂದುವರಿಸಲು ಮನಸ್ಸು ಮಾಡುತ್ತವೆ ಅಂತಾ ಕಾದುನೋಡಬೇಕಿದೆ.

Leave A Reply

Your email address will not be published.