ಬೆಂಗಳೂರು ಗಲಭೆ ಪ್ರಕರಣ : ಪೊಲೀಸರ ಗುಂಡೇಟಿಗೆ ಓರ್ವ ಬಲಿ

0

ಬೆಂಗಳೂರು : ಸಾಮಾಜಿಕ‌ ಜಾಲತಾಣಗಳಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಓರ್ವ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಗುಂಪು ಚದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿಯೋರ್ವ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳ ಗುಂಪು ಶಾಸಕ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ಆರಂಭದಲ್ಲಿ ಮನೆಯ ಗಾಜುಗಳನ್ನು ಪುಡಿ ಮಾಡಿದ್ದ ದುಷ್ಕರ್ಮಿಗಳು ನಿಂತಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಮಾತ್ರವಲ್ಲ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೂ ಬೆಂಕಿ ಹಚ್ಚಿದ್ದು, ನೆಲ ಮಹಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇನ್ನು ಶಾಸಕರ ಅಕ್ಕಪಕ್ಕದ ಮನೆಗಳಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ವೇಳೆಯಲ್ಲಿ ಪೊಲೀಸರು ಗುಂಪನ್ನು ಚುದರಿಸಲು ಎಷ್ಟೇ ಪ್ರಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ನಂತರದಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡೇಟಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದು, ಮೂವರ ಕಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಇನ್ನು ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸರ ವಾಹನವನ್ನೂ ಜಖಂಗೊಳಿಸಿದ್ದಾರೆ. ಅಲ್ಲದೇ ಕಿಡಿಗೇಡಿಗಳು ಘಟನೆಯ ಕುರಿತು ವರದಿಯನ್ನು ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆಯೂ ದಾಳಿ ಮಾಡಿದ್ದಾರೆ. ಘಟನೆಯ ಬೆನ್ನಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರಿವನ್ನು ನೀಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಸೂಚನೆಯನ್ನು ನೀಡಿದ್ದಾರೆ. ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

Leave A Reply

Your email address will not be published.