ವಿಜಯ ಬ್ಯಾಂಕ್ ಕ್ಲರ್ಕ್ ಆಗಿದ್ದ ಮುತ್ತಪ್ಪ ರೈ ಭೂಗತ ಲೋಕದ ಡಾನ್ ಆಗಿದ್ದು ಹೇಗೆ ಗೊತ್ತಾ ?

0

ಭೂಗತಲೋಕದಲ್ಲಿ ಹಲವು ಹೆಸರುಗಳು ಇಂದಿಗೂ ಅಚ್ಚಳಿಯದೇ ಉಳಿದಿದೆ. ಭೂಗತಲೋಕದಲ್ಲಿ ಹತರಾದವರು ಅದೆಷ್ಟೋ ಮಂದಿ. ಆದ್ರೆ ಭೂಗತಲೋಕವನ್ನು ತೊರೆದು ಸಾಮಾಜಿಕ ಸೇವೆಯಲ್ಲಿ ಪ್ರಖ್ಯಾತಿ ಪಡೆದವರು ಮುತ್ತಪ್ಪ ರೈ. ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದ ರೈ ಕೆಲ ದಶಕಗಳ ಕಾಲ ಭೂಗತ ಲೋಕದ ದೊರೆಯಾಗಿ ಮೆರೆದಿದ್ದಾರೆ. ರೈ ಬದುಕಿನ ಜರ್ನಿಯೇ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಬೆಂಗಳೂರು ಭೂಗತ ಲೋಕದ ಮಟ್ಟಿಗೆ ಅಂದಿಗೂ ಇಂದಿಗೂ ಎಂದಿಗೂ ಅತಿರಂಜಕ ಹೆಸರು ಎಂದರೆ ಮುತ್ತಪ್ಪ ರೈ. ಏಕೆಂದರೆ 70 ದಶಕದಲ್ಲಿ ಕೇವಲ ಹಫ್ತ ವಸೂಲಿ, ಕಲಬೆರಕೆ ದಂಧೆ, ಆಯಿಲ್ ಇಂಡಸ್ಟ್ರಿ, ಬಾರ್-ಕ್ಲಬ್ ಇಂಡಸ್ಟ್ರಿ ಮತ್ತು ಸುಫಾರಿ ಕೊಲೆಗಳಿಗೆ ಸೀಮಿತವಾಗಿದ್ದ ರಾಜಧಾನಿಯ ರೌಡಿಸಂಗೆ ದುಬೈನಿಂದ ಆಫ್ರಿಕಾ ರಷ್ಯಾ ದೇಶದವರೆಗೆ ಕಾಂಟ್ಯಾಕ್ಟ್ ಬೆಳೆಸಿದ ಮೊದಲ ಡಾನ್ ಮುತ್ತಪ್ಪರೈ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾಗಿರೋ ಎನ್.ಮುತ್ತಪ್ಪ ರೈ, ನೆಟ್ಟಾಲ ನಾರಾಯಣ ರೈ ಮತ್ತು ಸುಶೀಲಾ ರೈ ಮಗನಾಗಿ ಜನಿಸಿದ ಮುತ್ತಪ್ಪ ರೈ, ತಾನು ಮುಂದೊಂದು ದಿನ ಭೂಗತ ಲೋಕದ ಡಾನ್ ಆಗ್ತೇನೆ ಅಂತಾ ಖುದ್ದು ಮುತ್ತಪ್ಪ ರೈ ಕೂಡ ಎಣಿಸಿರಲಿಲ್ಲ. ಪುತ್ತೂರಿನಲ್ಲಿ ಶಿಕ್ಷಣದ ಮುಗಿದ್ದ ರೈ ವಿಜಯ ಬ್ಯಾಂಕಿನಲ್ಲಿ ಕ್ಲರ್ಕ್ ಹುದ್ದೆಗೆ ನೇಮಕವಾಗಿದ್ದರು, ಆದರೆ ಬ್ಯಾಂಕಿನಲ್ಲಿ ಚೆಕ್ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪಕ್ಕೆ ರೈ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯ್ತು. ತನ್ನದಲ್ಲದ ತಪ್ಪಿಗೆ ಉದ್ಯೋಗವನ್ನು ಕಳೆದುಕೊಂಡಿದ್ದ ರೈ, ಹೊಟ್ಟೆಪಾಡಿಗಾಗಿ ಬೆಂಗಳೂರಿನತ್ತ ಮುಖಮಾಡಿದ್ದರು.

ಬೆಂಗಳೂರು ಸೇರಿದ್ದ ಮುತ್ತಪ್ಪ ರೈ ಬ್ರಿಗೇಡ್ ರಸ್ತೆಯ ಲೇಡಿಸ್ ಬಾರ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದರು. ಇಲ್ಲಿಂದಲೇ ರೈ ಅವರಿಗೆ ಭೂಗತ ಲೋಕ ನಂಟು ಬೆಳೆಯೋದಕ್ಕೆ ಶುರುವಾಗಿತ್ತು. ಆಗಾಗ ಬಾರ್ ಗೆ ಬರ್ತಿದ್ದ ಗೋಲ್ಡ್ ಡೀಲರ್ ಆಗಿರುವ ಅಶೋಕ್ ಶೆಟ್ಟಿ ಮತ್ತು ಶರತ್ ಶೆಟ್ಟಿ ಅವರ ಪರಿಚಯವಾಗುತ್ತದೆ. ನಂತರದಲ್ಲಿ ಭೂಗತ ಲೋಕದಲ್ಲಿ ಆ ಕಾಲದಲ್ಲಿಯೇ ಹೆಸರು ಮಾಡಿದ್ದ ಅಮರ್ ಆಳ್ವ ಪರಿಚಯವಾಗಿದ್ದು ಕೂಡ ಇದೇ ಬಾರ್ ನಿಂದಲೇ. ಆಗಿಂದಲೇ ರೈಗೆ ಭೂಗತಲೋಕದ ಕಡೆಗಿನ ಆಕರ್ಷಣೆ ಹೆಚ್ಚೋದಕ್ಕೆ ಶುರುವಾಗಿತ್ತು. ಅದು 1989ರ ನವೆಂಬರ್ 21ನೇ ತಾರೀಕು. ಬೆಂಗಳೂರಿನ ಲಾಲ್ ಬಾಗ್ ನಿಂದ ಜಯನಗರಕ್ಕೆ ಸಂಪರ್ಕ ಕಲ್ಪಿಸೋ ರಸ್ತೆಯ ತಿರುವಿನಲ್ಲಿ ಬೆಂಗಳೂರಿನ ಭೂಗತಲೋಕದ ದೊರೆಯಾಗಿ ಮೆರೆಯುತ್ತಿದ್ದ ಜಯರಾಜ್ ಅಂದು ಹೆಣವಾಗಿ ಮಲಗಿದ್ದ. ಡಾನ್ ಜಯರಾಜ್ ತನ್ನದೇ ಹಳೆಯ ಅಂಬಾಸಿಡರ್ ಕಾರಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಜಯರಾಜ್ ಕಣ್ಣಿಗೆ ಗುರಿಯಿಟ್ಟು ಗುಂಡು ಹಾರಿಸಲಾಗಿತ್ತು. ಈ ಘಟನೆಯಿಂದಾಗಿ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿಬಿದ್ದಿತ್ತು. ಬೆಂಗಳೂರಲ್ಲಿ ಕರಾಳ ಇತಿಹಾಸವನ್ನು ಹುಟ್ಟುಹಾಕಿದ್ದ ಪಾತಕಿಯೋರ್ವನ ಹತ್ಯೆಯಾಗಿತ್ತು. ಆವತ್ತು ಬೆಂಗಳೂರಲ್ಲಿ ಭೂಗತದೊರೆ ಎಂ.ಪಿ.ಜಯರಾಜ್ ನನ್ನು ಗುಂಡಿಕ್ಕಿ ಕೊಂದಿದ್ದು ಬೇರಾರೂ ಅಲ್ಲಾ, ಇದೇ ಮುತ್ತಪ್ಪ ರೈ.

ಜಯರಾಜ್ ಕೊಲೆಯ ನಂತರದಲ್ಲಿ ಮುತ್ತಪ್ಪ ರೈ ಭೂಗತಲೋಕದಲ್ಲಿ ಕಾಣಿಸಿಕೊಂಡಿದ್ರು. ಜಯರಾಜ್ ಹತ್ಯೆಗೆ ಸುಫಾರಿ ಕೊಟ್ಟಿದ್ದ ಆಯಿಲ್ ಕುಮಾರ್ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ತಿದ್ದಾನೆ ಅಂತಾ ಮುತ್ತಪ್ಪ ರೈ ಕುಮಾರ್ ನನ್ನು ಕೊಂದು ಮುಗಿಸಿದ್ರು. ಆದರೆ ಮುತ್ತಪ್ಪ ರೈಗೆ ಆಯಿಲ್ ಕುಮಾರ್ ನಿಂದ ಸುಫಾರಿ ಕೊಡಿಸಿದ್ದ ಅಮರ್ ಆಳ್ವನಿಗೆ ಇದು ಇಷ್ಟವಾಗಲಿಲ್ಲ. ಆರಂಭದಿಂದಲೂ ಒಟ್ಟೊಟ್ಟಿಗಿದ್ದ ಮುತ್ತಪ್ಪ ರೈ ಹಾಗೂ ಅಮರ್ ಆಳ್ವ ಆಯಿಲ್ ಕುಮಾರ್ ನ ಕೊಲೆಯ ನಂತರಲ್ಲಿ ದೂರವಾಗಿದ್ದರು. ಅಂಡರ್ ವಲ್ಡ್ ನಲ್ಲಿ ಎರಡು ಬಣಗಳು ಹುಟ್ಟಿಕೊಂಡಿದ್ದವು. ಆಯಿಲ್ ಕುಮಾರ್ ಹತ್ಯೆಗೆ ಸಂಬಂಧಿಸಿದಂತೆ ಅಮರ್ ಆಳ್ವ ತನ್ನ ಸಹಚರರ ಜೊತೆ ಸೇರಿ ರೈ ಕೋರ್ಟಿಗೆ ಹಾಜರಾಗುವ ಹೊತ್ತಲ್ಲಿ ಮುತ್ತಪ್ಪ ರೈ ಮೇಲೆ ಗುಂಡಿನ ದಾಳಿ ನಡೆದಿತ್ತು. ಐದು ಗುಂಡುಗಳು ಮುತ್ತಪ್ಪ ರೈ ದೇಹವನ್ನು ಹೊಕ್ಕಿದ್ದವು. ಅಲ್ಲದೇ ಕಿಡ್ನಿಗೂ ಹಾನಿಯಾಗಿತ್ತು.

ಜೈಲಿನಿಂದ ಹೊರಬಂದ ಮೇಲೆ ಅಮರ್ ಆಳ್ವ ಹಾಗೂ ಮುತ್ತಪ್ಪ ರೈ ದ್ವೇಷ ಇನ್ನಷ್ಟು ಹೆಚ್ಚಾಗಿತ್ತು. ಅಮರ್ ಆಳ್ವ ಹಾಗೂ ಯತೀಶ್ ಶೆಟ್ಟಿ ಗೋಲ್ಡ್ ಸ್ಮಗ್ಲಿಂಗ್ ಮಾಡ್ತಿದ್ರು. ಆದರೆ ಶೆಟ್ಟಿ ಹಾಗೂ ಅಮರ್ ಆಳ್ವ ನಡುವೆ ವೈಯಕ್ತಿತ ವಿಚಾರಕ್ಕೆ ದ್ವೇಷ ಹುಟ್ಟಿಕೊಂಡಿತ್ತು. ಶೆಟ್ಟಿ ಮುತ್ತಪ್ಪ ರೈ ಸಹಾಯಕೋರಿದ್ದ. ಮಂಗಳೂರಿನಲ್ಲಿ ಭೂಗತಲೋಕವನ್ನು ಅನಾವರಣಗೊಳಿಸಿದ್ದ ಅಮರ್ ಆಳ್ವನನ್ನ ಹತ್ಯೆ ಮಾಡೋದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಮಾಸ್ಟರ್ ಮೈಂಡ್ ಕಿಲ್ಲರ್ ಮುತ್ತಪ್ಪ ರೈ, ಅಮರ್ ಆಳ್ವ ತನ್ನ ಮಗಳ ಜೊತೆಗೆ ಶಾಪಿಂಗ್ ಗೆ ಬಂದಿದ್ದ ವೇಳೆಯಲ್ಲಿ ಹತ್ಯೆ ಮಾಡಿದ್ರು. ಅಮರ್ ಆಳ್ವ ಹತ್ಯೆಯಾಗುತ್ತಲೇ ಕಡಲನಗರಿ ಬೆಚ್ಚಿಬಿದ್ದಿತ್ತು. ಅಮರ್ ಆಳ್ವ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾತಕಿ ಉದಯ್ ನನ್ನು ಕೊಂದು ಮುಗಿಸಿದ್ರೂ ರೈ.

ದಾವೂದ್, ಚೋಟಾ ಶಕೀಲ್ ನಂಟು
ಬೆಂಗಳೂರಿನಲ್ಲಿ ಇದ್ದುಕೊಂಡೇ ಡ್ಯಾನ್ಸ್ ಬಾರ್ ಓಪನ್ ಮಾಡಿದ್ದ ರೈ, ನಂತರದಲ್ಲಿ ಬಾರ್ ಗಳಿಂದಲೂ ಹಪ್ತಾ ವಸೂಲಿಗೆ ಇಳಿದಿದ್ದರು. ಆದರೆ ಅಮರ್ ಆಳ್ವ ಕೊಲೆಯಾಗುತ್ತಲೇ ಪೊಲೀಸರು ಮುತ್ತಪ್ಪ ರೈ ಬೆನ್ನಿಗೆ ಬಿದ್ದಿದ್ರು, ಕೊಲೆ ಪ್ರಕರಣದ ತನಿಖೆಗೆ ಇಳಿದಿದ್ದ ಐಪಿಎಸ್ ಅಧಿಕಾರಿ ಕೆಂಪಯ್ಯ, ಮುತ್ತಪ್ಪ ರೈ ಮನೆಯ ಮೇಲೆ ದಾಳಿ ಮಾಡಿದ್ರು. ಪೊಲೀಸರು ದಾಳಿ ಮಾಡುತ್ತಲೇ ಮುತ್ತಪ್ಪ ರೈ ಜೋಸೆಫ್ ಡಿ ಕುನ್ಹಾ ಹೆಸರಲ್ಲಿ ದುಬೈಗೆ ಪರಾರಿಯಾಗಿದ್ದರು. ದೂರದ ದುಬೈನಲ್ಲಿ ಕುಳಿತು ತನ್ನ ಸಹಚರರ ಮೂಲಕವೇ ಬೆಂಗಳೂರು, ಮಂಗಳೂರಿನಲ್ಲಿ ಪಾತಕ ಕೃತ್ಯಗಳನ್ನು ಮಾಡಿಸುತ್ತಿದ್ರು ರೈ.ದೂರದ ದುಬೈನಲ್ಲಿದ್ದರೂ ಕೂಡ ಮುತ್ತಪ್ಪ ರೈ ಬೆಂಗಳೂರಿನ ಭೂಗತ ಲೋಕದಲ್ಲಿ ದೊರೆಯಾಗಿ ಮೆರೆಯೋದಕ್ಕೆ ಶುರುಮಾಡಿದ್ದರು. ತನ್ನದೇ ಹೆಸರಲ್ಲಿ ಡ್ಯಾನ್ಸ್ ಬಾರ್, ಆಸ್ತಿ ಖರೀದಿಯನ್ನೂ ಮಾಡಿದ್ದರು ರೈ.

ದುಬೈನಲ್ಲಿ ಭೂತಕ ಪಾತಕಿಗಳಾಗಿರುವ ದಾವೂದ್ ಇಬ್ರಾಹಿಂ ಹಾಗೂ ಚೋಟಾ ಶಕೀಲ್ ಸ್ನೇಹ ಸಂಪಾದನೆಯನ್ನು ಮಾಡಿದ್ದರು. ಮುತ್ತಪ್ಪ ರೈ ಶಿಷ್ಯನಾಗಿದ್ದ ಬನ್ನಂಜೆ ರಾಜಾ ದೊಡ್ಡ ಗ್ಯಾಂಗ್ ಕಟ್ಟಿಕೊಂಡಿದ್ದ. ತನ್ನ ಶಿಷ್ಯನ ಮೂಲಕವೇ 2001ರಲ್ಲಿ ಬಿಲ್ಡರ್ ಸುಬ್ಬರಾವ್ ಕೊಲೆ ಮಾಡಿಸ್ತಾರೆ. ಬಿಲ್ಡರ್ ಸುಬ್ಬರಾವ್ ಹತ್ಯೆ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸುತ್ತೆ. ಇದೇ ವಿಚಾರಕ್ಕೆ ಮುತ್ತಪ್ಪ ರೈ ಹಾಗೂ ಪಾತಕಿ ಶರತ್ ಶೆಟ್ಟಿ ನಡುವೆ ಬಿನ್ನಾಭಿಪ್ರಾಯ ಏರ್ಪಡುತ್ತೆ. ನಕಲಿ ಪಾಸ್ ಪೋರ್ಟ್ ಬಳಸಿ ದುಬೈ ಸೇರಿರೋ ವಿಚಾರವನ್ನು ಶರತ್ ಶೆಟ್ಟಿ ದುಬೈ ಸರಕಾರಕ್ಕೆ ತಿಳಿಸಿದ್ರು. ನಂತರ ದುಬೈ ಮುತ್ತಪ್ಪ ರೈ ಅವರನ್ನು ಗಡಿಪಾರು ಮಾಡುತ್ತಲೇ ರೈ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಜೈಲಿನಲ್ಲಿದ್ದುಕೊಂಡೇ ಚೋಟಾ ಶಕೀಲ್ ಬಳಿ ವ್ಯವಹಾರವನ್ನು ಕುದುರಿಸಿ ಶರತ್ ಶೆಟ್ಟಿಯನ್ನು ದುಬೈನಲ್ಲಿಯೇ ಕೊಂದು ಮುಗಿಸಿದ್ರು. ಒಂದು ಕಾಲದಲ್ಲಿ ಸ್ನೇಹಿತನಾಗಿದ್ದ ದಾವೂದ್ ಇಬ್ರಾಹಿಂ ಜೊತೆಗೆ ದ್ವೇಷ ಕಟ್ಟಿಕೊಂಡಿದ್ದರು ಮುತ್ತಪ್ಪ ರೈ.

ಅನಾರೋಗ್ಯದಿಂದ ಪತ್ನಿಯ ನಿಧನ
ವಿಜಯ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದಾಗಲೇ ಮುತ್ತಪ್ಪ ರೈ ಅವರು ರೇಖಾ ಅವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ಬೆಂಗಳೂರಲ್ಲಿ ವಾಸವಾಗಿದ್ದ ರೈ ಭೂಗತ ಲೋಕಕ್ಕೆ ಎಂಟ್ರಿಯಾದ ಮೇಲೆ ದುಬೈನಲ್ಲಿ ಭೂಗತರಾಗಿದ್ದರು. ಭೂಗತ ಲೋಕದಿಂದ ದೂರ ಉಳಿದ ಮೇಲೆ ಬಿಡದಿಯಲ್ಲಿ ನೆಲೆ ಕಂಡಿದ್ದರು. ಆದರೆ ಅನಾರೋಗ್ಯಕ್ಕೆ ತುತ್ತಾಗಿದ್ದ ಪತ್ನಿ ರೇಖಾ ಅವರು 2013ರಲ್ಲಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮುತ್ತಪ್ಪ ರೈ ಅವರಿಗೆ ರಾಖಿ ಮತ್ತು ರಿಕ್ಕಿ ಅನ್ನೋ ಇಬ್ಬರು ಮಕ್ಕಳಿದ್ದಾರೆ.

ಜಯಕರ್ನಾಟಕ ಸಂಘಟನೆಯ ಹುಟ್ಟು
2002ರಲ್ಲಿ ದುಬೈನಲ್ಲಿದ್ದ ಮುತ್ತಪ್ಪ ರೈ ಅವರನ್ನು ಗಡಿಪಾರು ಮಾಡಲಾಗಿತ್ತು. ಸಿಬಿಐ, ರಾ, ಐಬಿ ಹಾಗೂ ಕರ್ನಾಟಕ ಪೊಲೀಸರು ರೈ ಅವರನ್ನು ಸುದೀರ್ಘ ಅವಧಿಯ ವರೆಗೆ ವಿಚಾರಣೆಯನ್ನು ನಡೆಸಿದ್ದರು. ಕೊಲೆ, ಸುಲಿಗೆ, ಭೂ ಸ್ವಾಧೀನ ಸೇರಿದಂತೆ ಹಲವು ಆರೋಪಗಳು ರೈ ಅವರ ಮೇಲಿದ್ದರೂ ಕೂಡ ವಿಚಾರಣೆಯ ವೇಳೆಯಲ್ಲಿ ಯಾವೊಂದು ಪ್ರಕರಣಗಳು ಸಾಭೀತಾಗಿರಲಿಲ್ಲ. ಭೂಗತಲೋಕದಿಂದ ಹೊರಬಂದ ಮುತ್ತಪ್ಪ ರೈ ಸಾಮಾಜಿಕ ಕಾರ್ಯಗಳಲ್ಲಿಯೂ ತನ್ನನ್ನ ತೊಡಗಿಸಿಕೊಂಡಿದ್ದರು. ಜಯಕರ್ನಾಟಕ ಸಂಘಟನೆಯನ್ನು ಹುಟ್ಟುಹಾಕುವ ಮೂಲಕ ಕನ್ನಡದಪರ ಹೋರಾಟಗಳನ್ನು ಮಾಡಿದ್ದಾರೆ. ಮಾತ್ರವಲ್ಲ ಸಾಮಾಜಿಕ ಸೇವೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು. ಬಿಡದಿಯಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಕಾಯಕ ಮಾಡುವ ಕನಸು ಕಂಡಿದ್ದರು.

ರೈ ಸಿನಿಮಾ ಮಾಡೋದಕ್ಕೆ ಹೊರಟಿದ್ದ ವರ್ಮಾ
ಇನ್ನು ಮುತ್ತಪ್ಪ ರೈ ಭೂಗತ ಲೋಕದಲ್ಲಿ ಬೆಳೆದುಬಂದ ಕಥೆಯನ್ನು ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡೋದಕ್ಕೆ ಹೊರಟಿದ್ದರು. ರೈ ಅನ್ನೋ ಹೆಸರಿನ ಸಿನಿಮಾಕ್ಕೆ ತಾವೇ ಸ್ಕ್ರೀಪ್ಟ್ ಬರೆದು ನಿರ್ದೇಶನ ಮಾಡಲು ಮುಂದಾಗಿದ್ದರು, ಆದರೆ ಕಾರಣಾಂತಗಳಿಂದಾಗಿ ಸಿನಿಮಾ ರಿಲೀಸ್ ಆಗಲಿಲ್ಲ.

ಹಲವು ದಶಕಗಳ ಕಾಲ ಭೂಗತಲೋಕದ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಕೊನೆಗೂ ಅಂಡರ್ ವಲ್ಡ್ ಗೆ ಗುಡ್ ಬೈ ಹೇಳಿದ್ದರು. ಕಳೆದೊಂದು ದಶಕಗಳ ಹಿಂದೆಯೇ ಬಿಡದಿಯಲ್ಲಿ ಮಕ್ಕಳು ಹಾಗೂ ಮಡದಿಯ ಜೊತೆಗೆಯಲ್ಲಿ ಕಾಲ ಕಳೆಯುತ್ತಿದ್ದರು. ಪಾತಕಲೋಕದಿಂದ ಹೊರಬಂದ ರೈ, ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಆದರೆ ಅಂತಿರಂಜಕ ಬದುಕು ಮುತ್ತಪ್ಪ ರೈ ಬದುಕಿಗೆ ಕೊಳ್ಳಿಯಿಟ್ಟಿದೆ.

ಹಲವು ವರ್ಷಗಳ ಕಾಲ ಬಿಟ್ಟುಬಿಡದೆ ಕಾಡಿದ ಕ್ಯಾನ್ಸರ್ ಮಹಾಮಾರಿ ಕೊನೆಗೂ ರೈ ಅವರ ಬದುಕಿಗೆ ಕೊಳ್ಳಿಯಿಟ್ಟಿದೆ. ಪಾತಕಲೋಕದಿಂದ ದೂರ ಉಳಿದಿದ್ರೂ ಮುತ್ತಪ್ಪ ರೈ ಹೆಸರು ಕೇಳಿದ್ರೆ ಸಾಕು ಭೂಗತ ಲೋಕ ಬೆಚ್ಚಿಬೀಳಿಸುವಷ್ಟರ ಮಟ್ಟಿಗೆ ರೈ ಹವಾ ಸೃಷ್ಟಿಸಿದ್ದರು. ಆದ್ರೀಗ ಭೂಗತ ದೊರೆ ಮುತ್ತಪ್ಪ ಹೆಸರು ಇನ್ನು ನೆನಪು ಮಾತ್ರ

Leave A Reply

Your email address will not be published.