‘ಇಟ್ ಈಸ್ ಓವರ್’: ಪಾಕಿಸ್ತಾನದಲ್ಲೂ ನಡೆಯುತ್ತಾ Gen Z ದಂಗೆ?

Pakistan Gen Z: ಪಾಕಿಸ್ತಾನದ ಆಡಳಿತಾರೂಢ ಗಣ್ಯರು ಮತ್ತು ಮಿಲಿಟರಿ ಸ್ಥಾಪನೆಯ ವಿರುದ್ಧ ಯುವ ಪೀಳಿಗೆಯ ಆಕ್ರೋಶವನ್ನು ಪ್ರತಿಬಿಂಬಿಸುವ ಲೇಖನವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಅಲ್ಲಿನ ಸರ್ಕಾರದ ಸೆನ್ಸಾರ್‌ಶಿಪ್ ನೀತಿಯನ್ನು ಬೆತ್ತಲೆ ಮಾಡಿದೆ.

ಅಮೆರಿಕದ ಅರ್ಕಾನ್ಸಾಸ್ ವಿಶ್ವವಿದ್ಯಾಲಯದಲ್ಲಿ ಕ್ರಿಮಿನಾಲಜಿ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಪಾಕಿಸ್ತಾನಿ ವಿದ್ಯಾರ್ಥಿ ಜೋರೈನ್ ನಿಜಾಮನಿ, ಜನವರಿ 1 ರಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ನಲ್ಲಿ ‘ಇಟ್ ಈಸ್ ಓವರ್’ (It is Over) ಎಂಬ ಹೆಸರಿನ ಲೇಖನವನ್ನು ಬರೆದಿದ್ದರು. ಲೇಖನ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಅದನ್ನು ಪತ್ರಿಕೆಯ ಜಾಲತಾಣದಿಂದ ತೆಗೆದುಹಾಕಲಾಯಿತು.

ಪಾಕಿಸ್ತಾನದ ಹಳೆಯ ತಲೆಮಾರಿನ ಆಡಳಿತಗಾರರು ಮತ್ತು ಮಿಲಿಟರಿ ಗಣ್ಯರು ಅಲ್ಲಿನ ಯುವ ಪೀಳಿಗೆಯ ಮೇಲೆ ಹೊಂದಿದ್ದ ಪ್ರಭಾವ ಮತ್ತು ನಿಯಂತ್ರಣವನ್ನು ಈಗ ಕಳೆದುಕೊಂಡಿದ್ದಾರೆ ಎಂದು ನಿಜಾಮನಿ ವಾದಿಸಿದ್ದಾರೆ. ಬಲಪ್ರಯೋಗ ಅಥವಾ ಬೆದರಿಕೆಯ ಮೂಲಕ ಯುವಕರ ಧ್ವನಿಯನ್ನು ಇನ್ನು ಮುಂದೆ ಅಡಗಿಸಲು ಸಾಧ್ಯವಿಲ್ಲ ಎಂಬುದು ಲೇಖನದ ಸಾರವಾಗಿತ್ತು. ಪಾಕಿಸ್ತಾನದಲ್ಲಿ ‘ಜೆನ್ ಝಡ್’ (Gen Z) ಕ್ರಾಂತಿಯು ಹಿಂಸಾಚಾರದ ಮೂಲಕವಲ್ಲ, ಬದಲಾಗಿ ಹಳೆಯ ಕಟ್ಟುಪಾಡುಗಳನ್ನು ಪ್ರಶ್ನಿಸುವ ಆಲೋಚನೆಗಳ ಮೂಲಕ ನಡೆಯುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು.

ಪುರುಷರ ಬ್ಯಾಂಕ್ ಖಾತೆಗೆ 2,000; ಯಾರಿಗೆ ಸಿಗಲಿದೆ ಹಣ?

ವೈರಲ್ ಆಗಲು ಕಾರಣವೇನು?
ಪಾಕಿಸ್ತಾನದ ಸೇನೆಯ ಒತ್ತಡಕ್ಕೆ ಮಣಿದು ಪತ್ರಿಕೆಯು ಈ ಲೇಖನವನ್ನು ಡಿಲೀಟ್ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿದೆ. ಲೇಖನವನ್ನು ಅಳಿಸಿಹಾಕಿದ ಬೆನ್ನಲ್ಲೇ, ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದವು. ಇದರಿಂದಾಗಿ ರಾತ್ರೋರಾತ್ರಿ ಜೋರೈನ್ ನಿಜಾಮನಿ ಪಾಕಿಸ್ತಾನದ ಯುವಜನತೆಯ ಪಾಲಿಗೆ ‘ನ್ಯಾಷನಲ್ ಹೀರೋ’ ಆಗಿ ಹೊರಹೊಮ್ಮಿದ್ದಾರೆ.

ಜೋರೈನ್ ನಿಜಾಮನಿ ಅವರು ಪಾಕಿಸ್ತಾನದ ಖ್ಯಾತ ನಟರಾದ ಫಜಿಲಾ ಖಾಜಿ ಮತ್ತು ಕೈಸರ್ ಖಾನ್ ನಿಜಾಮನಿ ಅವರ ಪುತ್ರ. ಸರ್ಕಾರದ ಸೆನ್ಸಾರ್‌ಶಿಪ್ ಪ್ರಯತ್ನವೇ ಈ ಲೇಖನವು ವಿಶ್ವಾದ್ಯಂತ ಸುದ್ದಿಯಾಗುವಂತೆ ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories