Ragini: ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನವಾದ್ರು ನಟಿ ರಾಗಿಣಿ ದ್ವಿವೇದಿ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ, ತಮ್ಮ ಸಾಮಾಜಿಕ ಸೇವೆಗಾಗಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರವಾಗಿದ್ದು, ಈ ಸಂತೋಷದ ಸಂಗತಿಯನ್ನು ತುಪ್ಪದ ಬೆಡಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2021 ನೇ ಸಾಲಿನ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಟ್ರೋಫಿಯೊಂದಿಗೆ ನಟಿ ರಾಗಿಣಿ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಚ್ಚಕೆಂಪು ಹೂಗಳಿರುವ ಸೀರೆಯಲ್ಲಿ ಟ್ರೋಫಿ ಜೊತೆ ರಾಗಿಣಿ ಪೋಟೋ ಗಮನ ಸೆಳೆಯುತ್ತಿದೆ.

ಸಾಮಾಜಿಕ ಕ್ಷೇತ್ರದಲ್ಲಿ ರಾಗಿಣಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ದಕ್ಷಿಣ ಭಾರತದಲ್ಲಿ ಈ ಗೌರವಕ್ಕೆ ಪಾತ್ರವಾದ ಮೊದಲ ನಟಿ ಎಂಬ ಗೌರವಕ್ಕೂ ರಾಗಿಣಿ ಭಾಜನವಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಶಸ್ತಿ ಸುದ್ದಿಯನ್ನು ಹಂಚಿಕೊಂಡಿರುವ ರಾಗಿಣಿ, ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2021 ನೇ ಸಾಲಿಗಾಗಿ ನನಗೆ ನೀಡಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಕೊವೀಡ್ ಸಮಯದಲ್ಲಿ ನನ್ನೊಂದಿಗೆ ಹಗಲು ರಾತ್ರಿ ಕೆಲಸ ಮಾಡಿದ ನನ್ನ ತಂಡಕ್ಕೆ ಧನ್ಯವಾದ.

ನನ್ನ ರಾಜ್ಯದಿಂದ ನಾನು ಸ್ಪೂರ್ತಿಯಿಂದ,ಹೆಮ್ಮೆಯಿಂದ ನಿಲ್ಲುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಈ ಪ್ರಶಸ್ತಿ ನನಗೆ ಉತ್ಸಾಹ ತುಂಬಿದೆ ಎಂದಿದ್ದಾರೆ.

ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡಿದ್ದ ರಾಗಿಣಿ ಪ್ರತಿನಿತ್ಯ ಆಹಾರ ಪದಾರ್ಥ, ದಿನಸಿ ವಸ್ತು ಸೇರಿದಂತೆ ಹಲವು ಅಗತ್ಯ ವಸ್ತು ಪೊರೈಸಿದ್ದರು. ಮಾತ್ರವಲ್ಲ ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಅಗತ್ಯ ವಸ್ತು ಪೊರೈಕೆ ಸೇರಿದಂತೆ ಹಲವರ ಸಹಾಯಕ್ಕೆ ಧಾವಿಸಿ ಸಮಾಜಮುಖಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

Comments are closed.