ಹಿರಿಯ ನಾಗರಿಕರೇ ಇವರ ಟಾರ್ಗೆಟ್ : ನಕಲಿ ಆಯುರ್ವೇದಿಕ್ ಔಷಧಿ ಮಾರಾಟಗಾರರ ಬಂಧನ

ಬೆಂಗಳೂರು : ಈ ತಂಡ ಹಿರಿಯ ನಾಗರಿಕರನ್ನೇ ಟಾರ್ಗೇಟ್ ಮಾಡುತ್ತೆ. ಹಿರಿಯ ಮನವೊಲಿಸಿ ನಕಲಿ ಆಯುರ್ವೇದಿಕ್ ಔಷಧಿಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ್ದ 6 ಮಂದಿಯ ತಂಡವನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.ಸಂಜಿತ್ (30 ವರ್ಷ ), ಮಂಜುನಾಥ್ (40) , ಶಿವಲಿಂಗ (42), ರಮಾಕಾಂತ್ (37) ಮತ್ತು ಕಿಶನ್ (23) , ಕಲ್ಲೋಳಪ್ಪ ಗುರಪ್ಪ ಬಾಗಲಕೋಟೆ (63) ಬಂಧಿತ ಆರೋಪಿಗಳು.

ಹಿರಿಯ ನಾಗರಿಕರನ್ನು ಗುರಿಯಾಗಿರಿಸಿ ಕಾಯಿಲೆ ಗುಣಪಡಿಸುವುದಾಗಿ ನಂಬಿಸಿ ನಕಲಿ ಆಯುರ್ವೇದಿಕ್ ಔಷಧಿಗಳನ್ನು ಕೊಟ್ಟು ಹಣ ಪಡೆಯುತ್ತಿದ್ದರು.ಕಳೆದ ಸೆಪ್ಟೆಂಬರ್ 27ರಂದು ರವಿ ವಿ.ಆರ್.ಅನುಕರ್ ಎಂಬುವವರು ಕಾಲು, ಸೊಂಟದ ನೋವು ತೋರಿಸಿಕೊಳ್ಳುವ ಸಲುವಾಗಿ ಜಯನಗರ 3ನೆ ಬ್ಲಾಕ್ ನ ಆರ್ಥೊಪೆಡಿಕ್ ಸೆಂಟರ್ಗೆ ಹೋಗಿದ್ದಾಗ ಆಸ್ಪತ್ರೆ ಒಳಗೆ ನಿಂತಿದ್ದ ವ್ಯಕ್ತಿಯೊಬ್ಬ ತನ್ನ ಹೆಸರು ರಮೇಶ್ ಎಂದು ಪರಿಚಯಿಸಿಕೊಂಡಿದ್ದಾನೆ. ತನ್ನ ಅಣ್ಣ ಸೀತಾರಾಮ್ ರಾಜಾಜಿನಗರದ ಧನ್ವಂತರಿ ಆಯುರ್ವೇದಿಕ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರು ನಿಮ್ಮ ನೋವಿಗೆ ಔಷಧ ಕೊಡುತ್ತಾರೆ ಎಂದು ನಂಬಿಸಿ ಅವರನ್ನು ಧನ್ವಂತರಿ ಆಯುರ್ವೇದಿಕ್ ಸೆಂಟರ್ ಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆ ಬಳಿ ಇದ್ದ ಆರೋಪಿಗಳನ್ನು ತೋರಿಸಿ ಇವರೆಲ್ಲ ವೈದ್ಯರು ಮತ್ತು ಕೆಲಸದವರೆಂದು ರವಿ ಅವರನ್ನು ನಂಬಿಸಿ ನಿಮಗೆ ಇರುವ ಕಾಯಿಲೆಯನ್ನು ಗುಣಪಡಿಸುವುದಾಗಿ, ಅದಕ್ಕೆ 2,59,860ರೂ.ಆಗುತ್ತದೆ ಎಂದು ಹೇಳಿದ್ದಾನೆ.ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದು ರವಿ ಅವರು ತಿಳಿಸಿದಾಗ ನಿಮ್ಮ ಕಾಯಿಲೆ ಗುಣವಾಗದಿದ್ದರೆ ಹಣ ಹಿಂದಿರುಗಿಸುವುದಾಗಿ ನಂಬಿಸಿದ್ದರಿಂದ ಅವರ ಮಾತನ್ನು ನಂಬಿ ಚೆಕ್ ಮುಖಾಂತರ 2.50 ಲಕ್ಷ ಹಣವನ್ನು ಹಾಗೂ 9850ರೂ. ನಗದು ರೂಪದಲ್ಲಿ ಕೊಟ್ಟಿದ್ದಾರೆ. ನಂತರ ಇವರು ನೀಡಿದ ಔಷಧಿಯನ್ನು ರವಿ ಅವರು ತೆಗೆದುಕೊಂಡು ಹೋಗಿದ್ದಾರೆ.ಆಯುರ್ವೇದಿಕ್ ಔಷಧಿ ಪಡೆದರೂ ಕಾಯಿಲೆ ಗುಣವಾಗದೆ ಇದ್ದಾಗ ಮತ್ತೆ ಕ್ಲಿನಿಕ್ ಬಳಿ ಬಂದು ನೋಡಿದ್ದಾರೆ. ಆ ಸಂದರ್ಭದಲ್ಲಿ ಕ್ಲಿನಿಕ್ ಬಾಗಿಲು ಮುಚ್ಚಿರುವುದನ್ನು ಗಮನಿಸಿ ಅಕ್ಕಪಕ್ಕ ವಿಚಾರಿಸಿದಾಗ, ಆರೋಪಿಗಳು ಹಿರಿಯ ನಾಗರಿಕರನ್ನು ಗುರುತಿಸಿ ನಕಲಿ ಔಷಧಿ ಕೊಟ್ಟು ಹಣ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. ತಕ್ಷಣ ಈ ಬಗ್ಗೆ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಎಂ.ಜೋಷಿ, ಮೈಕೋ ಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಸುಧೀರ್ ಎಂ.ಹೆಗಡೆ, ಇನ್ಸ್ಪೆಕ್ಟರ್ ಅನಿಲ್ಕುಮಾರ್ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ 5 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಿರಿಯ ನಾಗರಿಕರಿಗೆ ನಕಲಿ ಔಷಧಿ ಕೊಟ್ಟು ನಂಬಿಸಿ ಹಣ ಪಡೆದು ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

Comments are closed.