ಸಿ.ಡಿ ಸ್ಫೋಟ ಜ್ವಾಲೆಯಲ್ಲಿ ಮಿಂದೆದ್ದವರು – ಬೆಂದವರು ..!

ಸಂಪುಟ ವಿಸ್ತರಣೆ ಒಂದು ಹಂತವಾದರೆ ಯತ್ನಾಳ್ ಸಿಡಿಸಿದ ಸಿ.ಡಿ.ಯ ಅವಾಂತರ ಮತ್ತೊಂದು ರೀತಿ ಇರಿಸುಮುರಿಸೂ ಕಾರಣ ವಾಗಿದೆ. ಯಾವುದೇ ಒಂದು ಘಟನೆ ಅಥವಾ ತೀರ ಇಷ್ಟವಾದವರು ಇದ್ದಕ್ಕಿದ್ದಂತೆ ದೂರವಾದರೆ ಆಗುವ ಆತಂಕವೇ ಇಷ್ಟೆಕ್ಕೆಲ್ಲಾ ಕಾರಣವಾಗಿರಲೂ ಉಂಟು. ಇದನ್ನು ಹೀಗೆ ಹೇಳಿದರೆ ಅರ್ಥವಾಗಲು ಕಷ್ಟವಾಗಲೂಬಹುದು. ಇದನ್ನು ಕೊಂಚ ಬಿಡಿಸಿ ವಿಶ್ಲೇಷಿಸಲು ಯತ್ನಿಸುವ.

ಸಿಡಿ ರಾಜಕೀಯವೇನು..? : ಇದರ ಮೂಲ ಹುಡುಕುತ್ತಾ ಹೋದಷ್ಟು ವಿಷಯ ಗಂಭೀರವಾಗುತ್ತಿರುವುದೇ ಗೊಂದಲಕ್ಕೆ ಕಾರಣ. ಯತ್ನಾಳ್ ಅವರ ಮಾತುಗಳೇ ಇದಕ್ಕೆ ಇಂಬು ನೀಡುತ್ತಿವೆ. ’ಸಿ.ಡಿ. ಹೊರಬಂದ್ರೆ ಎಲ್ಲಾ ವಿಷಯ ಪಬ್ಲಿಕ್ ಆಗುತ್ತೆ. ಸಿ.ಡಿ ಇಟ್ಕೊಂಡೇ ಸಚಿವರಾಗಿದ್ದಾರೆ. ಕಣ್ಣಿಂದ ನೋಡಲಾರದ ವಿಷಯ ಸಿ.ಡಿಯಲ್ಲಿದೆ. ನೈತಿಕ ಹೊಣೆಹೊತ್ತು ಸಿಎಂ ರಾಜೀನಾಮೆ ಕೊಡಬೇಲಕು’ ಎನ್ನುವುದು ಯತ್ನಾಳ್ ಅವರ ಒಟ್ಟಾರೆ ವಾದದ ಸಂಕ್ಷಿಪ್ತ ತಾತ್ಪರ್ಯ. ಸಿಎಂ ಅವರು ಯತ್ನಾಳ್ ಅವರಿಗೆ ಅವರು ಕೇಳಿದ ಪದವಿ ಕೊಟ್ಟಿದ್ದರೆ ಇದನ್ನು ಹೀಗೆ ಹೇಳುತ್ತಿದ್ದರೆ..? ಇದನ್ನು  ಅವರೇ ಯೋಚಿಸಬೇಕಾದ ವಿಷಯ. ರೇಣುಕಾಚಾರ್ಯ ಕೂಡ ಇದೇ ರೀತಿ ಕಿಡಿಕಾರುತ್ತಿದ್ದಾರೆ ನಿಜ. ಆದರೆ ಅವರ ಗುರಿ ಎಲ್ಲಾ ಸಿ.ಪಿಯೋಗೀಶ್ವರ್ ವಿರುದ್ಧವೇ ಇದೆ. ಅವರು ಫ್ರಾಡ್, ಅವರಿಗೆ ಸೀಟ್ ಕೊಟ್ಟಿದ್ದು ಪಕ್ಷ ತತ್ವ ಸಿದ್ಧಾಂತಕ್ಕೆ ವಿರುದ್ಧ ಎನ್ನುವುದು ರೇಣುಕಾಚಾರ್ಯ ವಾದ. ಪಕ್ಷ ಮಾತ್ರ ಇದರಾಚೆಗೆ ಯೋಚಿಸುತ್ತಿದೆ.

ಹಳೆ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪಕ್ಷ ಬಲಪಡಿಸಬೇಕು. ಡಿ.ಕೆ.ಶಿವಕುಮಾರ್ ಅವರಂತಹ ಪ್ರಭಾವ ನಾಯಕನ ವಿರುದ್ಧ ಸಿ.ಪಿ. ಯೋಗೀಶ್ವರ್ ಅವರಂತಹ ಪ್ರಬುದ್ಧ ರಾಜಕಾರಣಿಯ ಅಗತ್ಯವಿದೆ ಎಂಬುದನ್ನು ರಮೇಶ್‌ ಜಾರಕಿಹೊಳಿ ಹೈಕಮಾಂಡ್ ಅವರಿಗೆ ಮನವರಿಕೆ ಮಾಡಿಕೊಟ್ಟಿರುವುದು ರೇಣುಕಾಚಾರ್ಯ ಅವರಿಗೆ ತಿಳಿಯದ ಸತ್ಯವೇನಲ್ಲ. ಈ ಹಿನ್ನೆಲೆಯಲ್ಲೇ ರೇಣುಕಾಚಾರ್ಯ ಏನೇ ದೂರು ಕೊಟ್ಟರೂ ಸಿ.ಪಿ.ಯೋಗೀಶ್ವರ್ ವಿರುದ್ಧ ಕ್ರಮ ಕೈಗೊಳ್ಳುವುದು ಡೌಟು..!

ಸಿಎಂ ಕುರ್ಚಿಗೆ ಕಂಟಕ..? : ಭವಿಷ್ಯದಲ್ಲಿ ಇದರ ಪರಿಣಾಮ ಗೋಚರಿಸುತ್ತದೆ. ಅದು ಇಲ್ಲಿ ವಿಷಯಾಂತರ ಅನಿಸಿದರೂ ಯತ್ನಾಳ್ ಅವರು ಸಿಡಿಸಿದ ಸಿ.ಡಿ ವಿಷಯ ಮಾತ್ರ ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದಂತಿದೆ. ಶನಿವಾರ ಅಮಿತ್ ಶಾ ಅವರು ಬಂದದ್ದೂ, ಹೆಚ್ಚಿನ ಸಮಯ ಸಿಎಂ ಜೊತೆ ಕಳೆಯದೇ ಇರುವುದಕ್ಕೆ ಹಲವಾರು ಕಾರಣಗಳನ್ನು ಹುಡುಕಲಾಗುತ್ತಿದೆ. ಇದೇ ವಿಷಯ ವನ್ನು ಮುಂದಿಟ್ಟುಕೊಂಡ ಕೆಲವರು ಸಿ.ಡಿಯಿಂದಲೇ ಸಿಎಂ ಕುರ್ಚಿಗೂ ಕಂಟಕಬರುತ್ತದೆ ಎನ್ನುವ ಅಪಾಯವನ್ನು ರವಾನಿಸುತ್ತಿ ದ್ದಾರೆ. ಸಿಎಂ ಬದಲಾಗುತ್ತಾರೋ, ಇಲ್ಲಾ ಸಿ.ಡಿಯೇ ಸುಟ್ಟು ಕರಕಲಾಗುತ್ತದೆಯೋ. ಎನ್ನುವುದು ವಿಶ್ಲೇಷಣೆ ಪರಿಧಿಗೆ ಬರದ ವಿಚಾರ. ಆದರೆ ವರಿಷ್ಠರು ಪ್ರತಿಯೊಂದನ್ನೂ ಕೂಲಂಕಶವಾಗಿ ಅವಲೋಕಿಸುತ್ತಿದ್ದಾರೆ.

ನಂಬಿದವರೇ ಬಹಿರಂಗವಾಗಿ..! : ಇನ್ನೊಂದು ಪ್ರಮುಖ ವಿಷಯವೆಂದರೆ ಸಂಪುಟ ವಿಸ್ತರಣೆ ಆನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರೇ ಬಹಿರಂಗ ವಾಗ್ದಾಳಿ ನಡೆಸುತ್ತಿರುವುದೇ ವಿಲಕ್ಷಣ ಕ್ರಿಯೆ..! ಕೊಟ್ರೆ ಒಳಿತು, ಇಲ್ಲಾಂದ್ರೆ ಕೆಟ್ಟದ್ದು ಎನ್ನುವ ಮನೋಧರ್ಮವೇ ಆತಂಕಕಾರಿ.

ಮುಖ್ಯಮಂತ್ರಿ ತಿರುಗುಬಾಣ : ಇದನ್ನೆಲ್ಲಾ ನೊಡಿ ಸುಮ್ಮನೆ ಕೂಡುವ ಜಾಯಮಾನ ರಾಜಾಹುಲಿಯದ್ದಲ್ಲ.  ಬಹಿರಂಗ ವಾಗ್ದಾಳಿ ಮಾಡುತ್ತಿರುವವರಿಗೆ ಸಿಎಂ ಯಡಿಯೂರಪ್ಪ ಅವರು ನೇರವಾಗಿ ಟಾಂಗ್ ಕೊಟ್ಟಿದ್ದಾರೆ.‘ಹೋಗಿ ಹೈಕಮಾಂಡ್‌ಗೆ ದೂರು ಕೊಡಿ.’ ಅಂತ ವಿರೋಧಿಗಳಿಗೆ ತಿರುಗುಬಾಣ ಬಿಟ್ಟಿದ್ದು ‘ಆ ಮೂಲಕ ಗೊಂದಲ ಎಬ್ಬಿಸಬೇಡಿ’ ಎಂದು ಎಚ್ಚರಿಸಿದ್ದಾರೆ. ಆದರೂ ಸಿಎಂ ವಿರುದ್ಧದ ವಾಗ್ದಾಳಿಯನ್ನು ಆಪ್ತರು ಕಡಿಮೆ ಮಾಡಿಲ್ಲ.

ಬಹಿರಂಗ ಹೇಳಿಕೆಗಳಿಗೆ ಕಾರಣ..?: ಆಪ್ತರ ಆಕ್ರೋಶಕ್ಕೆ ಯಡಿಯೂರಪ್ಪ ಅವರು ಕ್ಯಾರೆ ಎಂದಿಲ್ಲ ನಿಜ. ಹೈಕಮಾಂಡ್ ಅಣತಿ ಯಂತೆ ಸಂಪುಟ ವಿಸ್ತರಣೆ ನಡೆಸಲಾಗಿದೆ ಎಂದು ಆಕ್ರೋಶಕ್ಕೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಆಪ್ತರು ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಲು ಕಾರಣವೇನು? ಎನ್ನುವ ಪ್ರಶ್ನೆಗೆ ಇಲ್ಲಿ ಕೆಲವು ಕಾರಣ ಕೊಡಬಹುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಾಮಾಜಿಕ ನ್ಯಾಯತತ್ದದಡಿ ಸಂಪುಟ ರಚನೆ ಮಾಡಿದ್ದರು. ಹೀಗಾಗಿ ಐದು ವರ್ಷಗಳ ಕಾಲ ಸಣ್ಣಪುಟ್ಟ ವ್ಯತ್ಯಾಸಗಳು ಬಂದರೂ ಇಷ್ಟೊಂದು ಬಹಿರಂಗ ವಾಗ್ದಾಳಿಯನ್ನು ಆಗ ಸ್ವಪಕ್ಷದವರಿಂದ ಸಿದ್ದರಾಮಯ್ಯ ಅವರು ಅಷ್ಟಾಗಿ ಎದುರಿಸಿರ ಲಿಲ್ಲ. ಆದರೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಾಮಾಜಿಕ ನ್ಯಾಯ (ಜಾತಿವಾರು ಸಚಿವರ ಲೆಕ್ಕಾಚಾರ) ನೋಡಿದರೆ ಲಿಂಗಾಯತ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಚಿವರಿದ್ದಾರೆ.

ರಾಜ್ಯದಲ್ಲಿ ಕೇವಲ 9 ಸಮುದಾಯಗಳಿಗೆ ಮಾತ್ರ ಯಡಿಯೂರಪ್ಪ ಅವರು ಪ್ರಾತಿನಿಧ್ಯ ಕೊಟ್ಟಿದ್ದಾರೆ. ಉಳಿದೆಲ್ಲ ಸಣ್ಣಪುಟ್ಟ ಸಮುದಾಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಇದೂ ಹಲವರ ಅಂತಃಕಲಹಕ್ಕೆ ತಿದಿಒತ್ತಿರುವುದೂ ಇದೆ.

ಅಂಕಿ ಅಂಶಗಳೇನು..?: ಸಂಪುಟ ವಿಸ್ತರಣೆಗೂ ಮುನ್ನ ಸಂಪುಟದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿ 9 ಲಿಂಗಾಯತ, 6 ಒಕ್ಕಲಿಗ , 2 ಬ್ರಾಹ್ಮಣ, 2 ಕುರುಬ, 3 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ, ರಜಪೂತ್ 1, ಮರಾಠ 1 ಹಾಗೂ ಈಡಿಗ ಸಮುದಾಯಕ್ಕೆ 1 ಸಚಿವ ಸ್ಥಾನ ನೀಡಲಾಗಿತ್ತು. ಈ ಅಸಮಾನತೆಯನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಿವಾರಿಸುತ್ತಾರೆ ಎಂದುಕೊಂಡಿದ್ದ ಶಾಸಕರಿಗೆ ಸಿಎಂ ಶಾಕ್ ನೀಡಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರ ಸಂಖ್ಯೆ 11 ಕ್ಕೇರಿದೆ. ಹಾಗೆಯೇ ಒಕ್ಕಲಿಗ 7, ಬ್ರಾಹ್ಮಣ 2, ಕುರುಬ 4, ಪರಿಶಿಷ್ಟ ಜಾತಿ 4, ಪರಿಶಿಷ್ಟ ಪಂಗಡ 2, ಹಿಂದುಳಿದ ವರ್ಗ 2, ಮರಾಠ ಸಮುದಾಯದ ಒಬ್ಬರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ರಾಜ್ಯದ ಕೇವಲ 9 ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಅಸಮಾಧಾನಕ್ಕೆ ಮತ್ತೊಂದು ಕಾರಣ ವೂ ಉಂಟು. ಸಂಪುಟ ವಿಸ್ತರಣೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಹಲವು ಪ್ರಮುಖ ಜಿಲ್ಲೆಗಳಿಂದ ಒಬ್ಬೇ ಒಬ್ಬ ಶಾಸಕ ರು ಸಚಿವರಾಗಿಲ್ಲ. ಹೀಗಾಗಿ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ತಮಗೇ ಸಚಿವಸ್ಥಾನ ಸಿಗುತ್ತದೆ ಎಂದುಕೊಂಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ತೀವ್ರ ಅಸಮಾಧಾನವಾಗಿದೆ. ದಾವಣಗೆರೆ ಜಿಲ್ಲೆಯೂ ಸೇರಿದಂತೆ 12 ಜಿಲ್ಲೆಗಳ ಶಾಸಕರಿಗೆ ಮಂತ್ರಿಯಾಗುವ ಭಾಗ್ಯ ಸಿಕ್ಕಿಲ್ಲ. ಇದರ ಪರಿಣಾಮ ನ್ಯಾಯ ಸಿಗದವರ ಆಕ್ರೋಶ ಸ್ಫೋಟಗೊಂಡಿದೆ. ಪರಿಹಾರ ಹಾಗೂ ಮತ್ತೊಂದು ಗಂಭೀರ ಸಮಸ್ಯೆಗೆ ಭಷ್ಯವೇ ಉತ್ತರಿಸಬೇಕು

ವರ್ತಮಾನದ ಒಗಟು: ಸಿ.ಡಿ ಸ್ಫೋಟದಿಂದ ಮುಖ್ಯಮಂತ್ರಿ ಹುದ್ದೆ ಮಾತ್ರ ಬದಲಾಗುವುದಿಲ್ಲ. ಸಿ.ಡಿ. ಜೊತೆ ಜೊತೆಗೆ ಅದನ್ನು ರೂಪಿಸಿದವರ ಮಾನವೂ ಹರಣವಾಗುತ್ತದೆ. ಠುಸ್ ಆದ್ರೆ ಪುಕ್ಕಟೆ ಮನೋರಂಜನೆ ಎನ್ನುವುದಷ್ಟೇ ಸತ್ಯ.

Comments are closed.