ಉಡುಪಿ : ಕಾಲೇಜು ಉಪನ್ಯಾಸಕ ನೇಣುಬಿಗಿದು ಆತ್ಮಹತ್ಯೆ

ಉಡುಪಿ : ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.

ಗದಗ ಜಿಲ್ಲೆಯ ರೋಣದ ನಿವಾಸಿ ವೆಂಕಟೇಶ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರು. ಹೆಬ್ರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸವಿರಲಿಲ್ಲ. ಅಲ್ಲದೇ ಪತ್ನಿ ಕೂಡ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವೆಂಕಟೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.

ಈ ಹಿಂದೆ ಮೂಡಬಿದಿರೆಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಇತ್ತೀಚೆಗೆ ಹೆಬ್ರಿ ಕಾಲೇಜಿಗೆ ಸೇರಿದ್ದರು. ಸುಮಾರು 5 ವರ್ಷದ ಹಿಂದೆ ಶಿರಸಿ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಹೆಬ್ರಿಯ ಬಡಗುಡ್ಡೆಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ಮದುವೆಯ ವಿಚಾರ ಮನೆಯವರಿಗೆ ಗೊತ್ತೇ ಇರಲಿಲ್ಲ ಎಂದು ತಿಳಿದುಬಂದಿದೆ.

ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಹೆಬ್ರಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ವೆಂಕಟೇಶ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Comments are closed.