ಸಾಹಸಕ್ಕೆ ಅಡ್ಡಿಯಾಗಲಿಲ್ಲ ವಯಸ್ಸು…! ಸೈಕಲ್ ನಲ್ಲೇ 2,200 ಕಿಲೋಮೀಟರ್ ಪ್ರವಾಸ ಹೊರಟ 68 ರ ವೃದ್ಧೆ

ಮಹಾರಾಷ್ಟ್ರ: ವಯಸ್ಸು ದೇಹಕ್ಕೆ ವಿನಃ ಮನಸ್ಸಿಗಲ್ಲ ಅನ್ನೋ ಮಾತಿದೆ. ಈ ಮಾತಿಗೆ ಜೀವಂತ ಉದಾಹರಣೆ ಎಂಬಂತೆ, ಮನೆಯಲ್ಲಿ ರಾಮಾಕೃಷ್ಣ ಅಂತ ಮೊಮ್ಮಕ್ಕಳ ಜೊತೆ ಕಾಲಕಳೆಯಬೇಕಾದ ವಯಸ್ಸಿನಲ್ಲಿ 68ರ ವೃದ್ಧೆಯೊಬ್ಬರು ಸೈಕಲ್ ಏರಿ ಮಹಾರಾಷ್ಟ್ರದಿಂದ ಜಮ್ಮುಕಾಶ್ಮೀರದ ವೈಷ್ಣೋದೇವಿ ದರ್ಶನಕ್ಕೆ ಹೊರಟಿದ್ದಾರೆ.

ಅಚ್ಚರಿ ಎನ್ನಿಸಿದರೂ ಇದು ಸತ್ಯ. ಮಹಾರಾಷ್ಟ್ರದ ಖಮಗಾಂವ್ ದ ಮಹಿಳೆ ರೇಖಾ ದೇವಪಂಕರ್ ಎಂಬ 68 ಹರೆಯದ ವೃದ್ಧೆ ಸೈಕಲ್ ನಲ್ಲೇ ಮಾತೆ ವೈಷ್ಣೋದೇವಿ ದರ್ಶನಕ್ಕೆ ತೆರಳಲು ಸಂಕಲ್ಪಿಸಿದ್ದಾರೆ. ಅಷ್ಟೇ ಅಲ್ಲ ಜುಲೈ 24 ರಿಂದ ತಮ್ಮ ಯಾತ್ರೆ ಆರಂಭಿಸಿದ್ದಾರೆ.

ಪ್ರತಿನಿತ್ಯ 40 ಕಿಲೋಮೀಟರ್ ಸೈಕಲ್ ತುಳಿಯುವ   ಈ ವೃದ್ಧೆ ವೈಷ್ಣೋದೇವಿ ತಲುಪಲು ಒಟ್ಟು 2200 ಕಿಲೋಮೀಟರ್ ಸೈಕಲ್ ಸವಾರಿ ಮಾಡಬೇಕಿದೆ. ರೇಖಾ ಅವರ ಸಾಹಸ  ಇದೀಗ ದೇಶದ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನರು ಅಜ್ಜಿ ಸೈಕಲ್ ಸವಾರಿ ವಿಡಿಯೋ ಹಂಚಿಕೊಂಡು ಆಕೆಯ ಉತ್ಸಾಹವನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಇನ್ನು ಅಜ್ಜಿ ಈಗಾಗಲೇ ಜಮ್ಮುಕಾಶ್ಮೀರ ತಲುಪಿದ್ದು, ಸಧ್ಯದಲ್ಲೇ ವೈಷ್ಣೋದೇವಿ ದರ್ಶನ ಪಡೆಯಲಿದ್ದಾರಂತೆ. ಅಜ್ಜಿ ರಸ್ತೆಯಲ್ಲಿ ಸೈಕಲ್ ತುಳಿಯುವ ವೇಳೆಯೂ ಜನರು ಆಕೆಯ ಶ್ರಮ ಶ್ಲಾಘಿಷಿಸಿದ್ದು, ಆಕೆಯೊಂದಿಗೆ ಸೆಲ್ಪಿ ತೆಗೆದುಕೊಂಡು ಆಕೆಗೆ ನೀರು,ಆಹಾರ ನೀಡಿ ಪ್ರೋತ್ಸಾಹಿಸಿದ್ದಾರಂತೆ.

ಅಜ್ಜಿ ಮನೆಯಲ್ಲಿ ಎಲ್ಲರ ಒಪ್ಪಿಗೆ ಪಡೆದೇ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದು, ಎಷ್ಟೋ ಜನರು ಅಜ್ಜಿಯ  ಈ ಸಾಹಸ ನೋಡಲಾಗದೇ ಫ್ರೀಯಾಗಿ ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಿ ವೈಷ್ಣೋದೇವಿ ದರ್ಶನ ಮಾಡಿಸುವುದಾಗಿ ಅಜ್ಜಿಯ ಮನವೊಲಿಸಿದ್ದಾರಂತೆ. ಆದರೂ 68 ರ ವೃದ್ಧೆ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಪ್ರಯಾಣ ಮುಂದುವರೆಸಿದ್ದಾರೆ.

Comments are closed.