ಜನಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲದ ಗೂಡಾಗಿದ್ಯಾಕೆ ?

0

ಬೆಂಗಳೂರು : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಬರೆದವರು ಬಿ.ಎಸ್.ಯಡಿಯೂರಪ್ಪ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರಂತಹ ಜನಪ್ರಿಯ ನಾಯಕರಿದ್ದರೂ ಕೂಡ, ಒಂದು ಹಂತದಲ್ಲಿ ಎಲ್ಲಾ ನಾಯಕರನ್ನೂ ಮೀರಿಸಿ ರಾಜ್ಯದಲ್ಲಿ ಜನಪ್ರಿಯ ಮುಖ್ಯಮಂತ್ರಿಯೆನಿಸಿಕೊಂಡವರು ಯಡಿಯೂರಪ್ಪ. ಆದ್ರೆ ಅದ್ಯಾಕೋ ಗೊತ್ತಿಲ್ಲ ಜನಪ್ರಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೊಂದಲ ಗೂಡಾಗಿದ್ದಾರಾ ಅನ್ನೋ ಆನುಮಾನ ವ್ಯಕ್ತವಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಮಲ ಪಾಳಯಕ್ಕೆ ಅಧಿಕಾರವನ್ನು ಗಿಟ್ಟಿಸಿಕೊಟ್ಟವರು ಬಿ.ಎಸ್.ಯಡಿಯೂರಪ್ಪ. ಕರ್ನಾಟಕ ರಾಜ್ಯದಲ್ಲಿ 4 ಬಾರಿ ಮುಖ್ಯಮಂತ್ರಿಯ ಹುದ್ದೆಯನ್ನು ಅಲಂಕರಿಸೋ ಮೂಲಕ ದಾಖಲೆಯನ್ನೂ ಬರೆದಿದ್ದಾರೆ. ಖಡಕ್ ಆಡಳಿತದ ಮೂಲಕವೇ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಯೂ ಹೆಸರು ಮಾಡಿದ್ದಾರೆ.

4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೇರುತ್ತಲೇ ರಾಜ್ಯದಲ್ಲಿ ನೆರೆಹಾವಳಿ ಕಾಣಿಸಿಕೊಂಡಿತ್ತು. ಕೇಂದ್ರದ ಸಹಕಾರವೇ ಇಲ್ಲದಿದ್ರೂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿಯೇ ನಿಭಾಯಿಸಿ ಯಶಸ್ವಿಯಾಗಿದ್ದರು.

ಆಲ್ಲದೇ ಕೊರೊನಾ ವಿಚಾರದಲ್ಲಿಯೂ ಯಡಿಯೂರಪ್ಪ ಪ್ರಾಮಾಣಿಕವಾಗಿಯೇ ಸ್ಪಂಧಿಸಿದ್ದಾರೆ. ಆದರೆ ಯಡಿಯೂರಪ್ಪ ಕೊರೊನಾ ವಿಚಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಗೊಂದಲ ಗೂಡಾಗಿದ್ದಾರೆ ಅಂತಾ ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿ ಕಲಬುರಗಿಯಲ್ಲಿ ಕೊರೊನಾ ಮಹಾಮಾರಿ ಬಲಿ ಪಡೆದಿತ್ತು. ಸಾಲದಕ್ಕೆ ಬೆಂಗಳೂರು ನಗರಕ್ಕೂ ಕೊರೊನಾ ಸೋಂಕು ವ್ಯಾಪಿಸಿತ್ತು. ಈ ವೇಳೆಯಲ್ಲಿ ತಜ್ಞರು ರಾಜ್ಯದಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಣೆಗೆ ಸಲಹೆ ನೀಡಿದಾಗ ಹಿಂದೇಟು ಹಾಕಿದ್ದರು. ಆದರೆ ನಂತರದಲ್ಲಿ ಮಾಧ್ಯಮಗಳು ಹಾಗೂ ತಜ್ಞರ ಬಲವಾದ ಒತ್ತಡಕ್ಕೆ ಮಣಿದು ಲಾಕ್ ಡೌನ್ ಆದೇಶಕ್ಕೆ ಒಪ್ಪಿಗೆ ಸೂಚಿಸಿದ್ದರು.

ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿ ಮಾಡಿದಾಗ ಯಾರು ಕೂಡ ಬೆಂಗಳೂರು ಬಿಟ್ಟು ಹೋಗುವಂತಿಲ್ಲಾ ಅಂತಾ ಫರ್ಮಾನು ಹೊರಡಿಸಿದ್ದರು. ಆದ್ರೆ ಸಂಜೆಯಾಗುತ್ತಲೇ ತನ್ನ ನಿಲುವನ್ನು ಬದಲಾಯಿಸಿ, ಬೆಂಗಳೂರಿನಿಂದ ತಮ್ಮೂರಿಗೆ ತೆರಳುವವರು ಹೋಗಬಹುದು ಅಂತಾ ಹೇಳಿಕೆ ಕೊಟ್ಟಿದ್ದಾರೆ.

ಇನ್ನು ನಂತರದಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಆದೇಶ ಸಡಿಲಗೊಳಿಸುವುದಾಗಿ ಹೇಳಿದ್ದರು. ಐಟಿ – ಬಿಟಿ ಕಂಪೆನಿಗಳಿಗೆ ಓಪನ್ ಮಾಡಲು ಅವಕಾಶ ಕಲ್ಪಿಸಿದ್ರು, ದ್ವಿಚಕ್ರ ಓಡಾಟಕ್ಕೂ ಅನುವು ಮಾಡಿಕೊಡುವುದಾಗಿ ಘೋಷಿಸಿದ್ದರು.

ಆದ್ರೆ ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಇಷ್ಟೇ ಅಲ್ಲಾ, ತಬ್ಲಿಗಿಗಳ ವಿಚಾರದಿಂದ ಹಿಡಿದು ಪಾದರಾಯನಪುರ ಪ್ರಕರಣದ ನಿರ್ವಹಣೆಯ ವರೆಗೂ ಯಡಿಯೂರಪ್ಪನವರು ಸ್ಪಷ್ಟ ನಿಲುವುಗಳು ಗೋಚರವಾಗಲೇ ಇಲ್ಲಾ.

ಲಾಕ್ ಡೌನ್ ಆದೇಶದಿಂದಾಗಿ ಕೆಎಂಎಫ್ ನಲ್ಲಿ ಉಳಿಕೆಯಾಗುವ ಹಾಲನ್ನು ಬಡವರಿಗೆ ಹಂಚಿಕೆ ಮಾಡೋದಾಗಿ ಘೋಷಿಸಿದ್ದರು. ಆದರೆ ಬಡವರ ಪಾಲಿಗಿದು ಸಂಜೀವಿನಿಯಾಗಿತ್ತು. ಆದರೆ ಹಾಲು ಹಂಚಿಕೆಯ ವೇಳೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ಜನ ಮುಗಿಬೀಳುವ ಹಂತಕ್ಕೆ ತಲುಪಿದ್ದಾರೆ. ಈ ವಿಚಾರದಲ್ಲಿಯೂ ಯಡಿಯೂರಪ್ಪ ಇಂದಿಗೂ ಗೊಂದಲದಲ್ಲಿಯೇ ಇದ್ದಾರಂತೆ.

ಕೊರೊನಾ ಆರಂಭದಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವುದೇ ಸ್ಪಷ್ಟ ನಿಲುವುಗಳನ್ನು ತೆಗೆದುಕೊಂಡಿಲ್ಲ. ಯಡಿಯೂರಪ್ಪನವರ ಈ ರೀತಿಯ ವರ್ತನೆ ಹಲವರಿಗೆ ಆಶ್ಚರ್ಯವನ್ನು ಮೂಡಿಸಿದೆ. ಒಂದು ಕಡೆ ಜನರ ಜೀವನದ ಬಗ್ಗೆ ಚಿಂತಿತರಾಗಿರುವಂತೆ ಯಡಿಯೂರಪ್ಪ ಕಾಣುತ್ತಾರೆ. ಇನ್ನೊಂದು ಕಡೆ ಕೊರೊನಾದಂತಹ ಬೀಕರ ಮಾರಿಯ ನಿರ್ವಹಣೆಯಲ್ಲಿಯೂ ಸ್ಪಷ್ಟ ನಿಲುವುಗಳಿಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ.

Leave A Reply

Your email address will not be published.