ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ಮಿನಿಮಂ ಡ್ಯೂ ಪಾವತಿ ಲಾಭವೇ? ಅಥವಾ ನಷ್ಟವೇ?
ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ಮಿನಿಮಂ ಡ್ಯೂ ಪಾವತಿಸುವುದು ಸುರಕ್ಷಿತ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದೇ ಅಭ್ಯಾಸ ಮುಂದಿನ ದಿನಗಳಲ್ಲಿ ಭಾರೀ ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು.

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಕೈಯಲ್ಲಿ ಹಣ ಇಲ್ಲದಿದ್ದರೂ ಬೇಕಾದ ವಸ್ತುಗಳನ್ನು ಖರೀದಿಸಲು ಇದು ನೆರವಾಗುತ್ತದೆ. ಆದರೆ ಇದೇ ಸೌಲಭ್ಯ ಅನೇಕ ಮಂದಿಯನ್ನು ನಿಧಾನವಾಗಿ ಸಾಲದ ಚಕ್ರದಲ್ಲಿ ಸಿಲುಕಿಸುತ್ತಿದೆ.
ಬಹುತೇಕ ಜನರು ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗದೆ “ಮಿನಿಮಂ ಡ್ಯೂ” ಮಾತ್ರ ಕಟ್ಟುತ್ತಾರೆ. ಹೇಗೋ ತಿಂಗಳು ಮುಗಿಯಿತು ಎಂದು ನೆಮ್ಮದಿ ಪಡುತ್ತಾರೆ. ಆದರೆ ನಿಜವಾದ ಸಮಸ್ಯೆ ಅಲ್ಲಿಂದಲೇ ಆರಂಭವಾಗುತ್ತದೆ. ನೀವು ಪಾವತಿಸುವ ಆ ಮಿನಿಮಂ ಮೊತ್ತ ಮುಖ್ಯ ಸಾಲವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ ಹೆಚ್ಚುತ್ತಿರುವ ಬಡ್ಡಿಯನ್ನು ಮಾತ್ರ ತಾತ್ಕಾಲಿಕವಾಗಿ ನಿಭಾಯಿಸುತ್ತದೆ.
ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಬಡ್ಡಿದರ ಸಾಮಾನ್ಯ ಸಾಲಗಳಿಗೆ ಹೋಲಿಸಿದರೆ ಬಹಳ ಹೆಚ್ಚು. ಕೆಲವು ಬ್ಯಾಂಕ್‌ಗಳಲ್ಲಿ ವರ್ಷಕ್ಕೆ 30ರಿಂದ 45 ಶೇಕಡಾವರೆಗೆ ಬಡ್ಡಿ ವಿಧಿಸಲಾಗುತ್ತದೆ. ಹೀಗಾಗಿ ತಿಂಗಳು ತಿಂಗಳಿಗೆ ಮಿನಿಮಂ ಡ್ಯೂ ಮಾತ್ರ ಪಾವತಿಸಿದರೆ, ಮೂಲ ಬಿಲ್ ಹಾಗೆಯೇ ಉಳಿದು ಅದರ ಮೇಲೆ ಚಕ್ರಬಡ್ಡಿ ಹೆಚ್ಚುತ್ತಾ ಹೋಗುತ್ತದೆ.
ಆಫರ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಸ್ಟೇಟಸ್ ಕಾರಣಕ್ಕೆ ಅನಗತ್ಯ ಖರೀದಿಗಳನ್ನು ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಲವರು ಕ್ರೆಡಿಟ್ ಕಾರ್ಡ್ ಅನ್ನು ಡೆಬಿಟ್ ಕಾರ್ಡ್‌ನಂತೆ ಬಳಸುತ್ತಾರೆ. ಇದರಿಂದ ತಿಂಗಳ ಸಂಬಳಕ್ಕಿಂತಲೂ ಹೆಚ್ಚು ಬಿಲ್ ಬರುತ್ತದೆ. ನಂತರ ಅದನ್ನು ತೀರಿಸಲು ಸಾಧ್ಯವಾಗದೆ ಸಾಲದ ಒತ್ತಡ ಹೆಚ್ಚುತ್ತದೆ.
ಇನ್ನೊಂದು ದೊಡ್ಡ ತಪ್ಪು ಎಂದರೆ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ತೆಗೆಯುವುದು. ಸಾಮಾನ್ಯ ಖರೀದಿಗಳಿಗೆ ಸಿಗುವ ಗ್ರೇಸ್ ಪೀರಿಯಡ್ ಇಲ್ಲಿ ಅನ್ವಯಿಸುವುದಿಲ್ಲ. ಹಣ ಡ್ರಾ ಮಾಡಿದ ಕ್ಷಣದಿಂದಲೇ ಹೆಚ್ಚುವರಿ ಬಡ್ಡಿ ಮತ್ತು ಸೇವಾ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಸಾಲದ ಮೊತ್ತ ಇನ್ನಷ್ಟು ವೇಗವಾಗಿ ಏರುತ್ತದೆ.
ಹಣಕಾಸು ತಜ್ಞರ ಪ್ರಕಾರ, ಅಗತ್ಯವಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಬೇಕು. ಪ್ರತಿ ತಿಂಗಳು ಸಂಪೂರ್ಣ ಬಿಲ್ ಪಾವತಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಬಳಸದ ಹೆಚ್ಚುವರಿ ಕಾರ್ಡ್‌ಗಳನ್ನು ಬ್ಯಾಂಕ್ ಮೂಲಕ ಮುಚ್ಚಿಸುವುದರಿಂದ ಅನಗತ್ಯ ವಾರ್ಷಿಕ ಶುಲ್ಕ ತಪ್ಪಿಸಬಹುದು. ನಿಯಂತ್ರಿತ ಖರ್ಚು ಮತ್ತು ಸರಿಯಾದ ಹಣಕಾಸು ಶಿಸ್ತು ಮಾತ್ರ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ನೀಡುತ್ತದೆ.



