ಎಲ್‌ಪಿಜಿ ಸಬ್ಸಿಡಿಗೆ ಈ ಕೆಲಸ ಕಡ್ಡಾಯ! ಇ-ಕೆವೈಸಿ ಇಲ್ಲದಿದ್ದರೆ ಸಿಲಿಂಡರ್ ಸಬ್ಸಿಡಿ ಸ್ಥಗಿತ
ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪಡೆಯುವ ಗ್ರಾಹಕರು ಪ್ರತೀ ಆರ್ಥಿಕ ವರ್ಷ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ತೈಲ ಕಂಪನಿಗಳು ಸೂಚನೆ ನೀಡಿವೆ. ಗಡುವಿನೊಳಗೆ ಪ್ರಕ್ರಿಯೆ ಮುಗಿಸದಿದ್ದರೆ ಸಬ್ಸಿಡಿ ಸ್ಥಗಿತವಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಹೊಸ ನಿಯಮ ಜಾರಿಗೆ ಬಂದಿದೆ. ಇನ್ನುಮುಂದೆ ಪ್ರತಿಯೊಂದು ಆರ್ಥಿಕ ವರ್ಷದಲ್ಲೂ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ ಎಂದು ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ.
ಇಂಡಿಯನ್ ಆಯಿಲ್, ಹೆಚ್‌ಪಿ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಗಳ ಗ್ರಾಹಕರು ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಬ್ಸಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗ್ರಾಹಕರು ಇ-ಕೆವೈಸಿಯನ್ನು ಮೂರು ರೀತಿಯಲ್ಲಿ ಸುಲಭವಾಗಿ ಮಾಡಿಸಿಕೊಳ್ಳಬಹುದು. ಸಂಬಂಧಿತ ಗ್ಯಾಸ್ ಕಂಪನಿಯ ಮೊಬೈಲ್ ಆಪ್ ಮೂಲಕ ಸ್ವತಃ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅಥವಾ ಸಮೀಪದ ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಬಹುದು. ಮನೆಗೆ ಸಿಲಿಂಡರ್ ತಲುಪಿಸುವ ಸಿಬ್ಬಂದಿಯ ಬಳಿಯಿರುವ ಮೊಬೈಲ್ ಆಪ್ ಮೂಲಕವೂ ಈ ಸೇವೆ ಲಭ್ಯವಿದೆ. ವಿಶೇಷವಾಗಿ ಈ ಎಲ್ಲಾ ಸೇವೆಗಳು ಉಚಿತವಾಗಿವೆ ಎಂದು ಕಂಪನಿಗಳು ತಿಳಿಸಿವೆ.
ಪ್ರಸ್ತುತ ಕೇಂದ್ರ ಸರ್ಕಾರ ವರ್ಷಕ್ಕೆ ಗರಿಷ್ಠ 9 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತಿದೆ. ಆದರೆ 8ನೇ ಮತ್ತು 9ನೇ ಸಿಲಿಂಡರ್‌ಗೆ ಸಂಬಂಧಿಸಿದ ಸಬ್ಸಿಡಿ ಮೊತ್ತವನ್ನು ಇ-ಕೆವೈಸಿ ಪೂರ್ಣಗೊಳ್ಳುವವರೆಗೆ ತಡೆಹಿಡಿಯಲಾಗುತ್ತದೆ. ಮಾರ್ಚ್ 31ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿದರೆ ತಡೆಹಿಡಿದ ಹಣವನ್ನು ಬಳಿಕ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಆದರೆ ಗಡುವು ಮೀರಿದರೆ ಆ ಸಬ್ಸಿಡಿ ಶಾಶ್ವತವಾಗಿ ರದ್ದಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದೇ ವೇಳೆ ಇ-ಕೆವೈಸಿ ಮಾಡಿಸದಿದ್ದರೂ ಗ್ಯಾಸ್ ಸಿಲಿಂಡರ್ ಸರಬರಾಜಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.
ತೈಲ ವಿತರಕರ ಸಂಘದ ಪ್ರತಿನಿಧಿಗಳು ಗ್ರಾಹಕರು ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದರಿಂದ ಸಬ್ಸಿಡಿ ನಿಲ್ಲುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.



