HDFC ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶಾಕ್! ಸೌಲಭ್ಯಗಳಲ್ಲಿ ಮಹತ್ವದ ಬದಲಾವಣೆ

HDFC ಬ್ಯಾಂಕ್ ತನ್ನ ಕೆಲವು ಕ್ರೆಡಿಟ್ ಕಾರ್ಡ್ ಸೌಲಭ್ಯಗಳಲ್ಲಿ ಬದಲಾವಣೆ ಘೋಷಿಸಿದ್ದು, ವಿಮಾನ ನಿಲ್ದಾಣ ಲಾಂಜ್ ಪ್ರವೇಶ ಹಾಗೂ ರಿವಾರ್ಡ್ ಪಾಯಿಂಟ್ ಗಳಿಕೆ ನಿಯಮಗಳಲ್ಲಿ ಹೊಸ ಷರತ್ತುಗಳನ್ನು ಜಾರಿಗೊಳಿಸಿದೆ.

HDFC ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಜುಲೈ 1ರಿಂದ ಕೆಲವು ಜನಪ್ರಿಯ ಕ್ರೆಡಿಟ್ ಕಾರ್ಡ್‌ಗಳ ಸೌಲಭ್ಯಗಳಲ್ಲಿ ಬದಲಾವಣೆ ಜಾರಿಯಾಗಲಿದ್ದು, ವಿಶೇಷವಾಗಿ ಏರ್‌ಪೋರ್ಟ್ ಲಾಂಜ್ ಪ್ರವೇಶ ಮತ್ತು ರಿವಾರ್ಡ್ ಪಾಯಿಂಟ್ ವ್ಯವಸ್ಥೆ ಮೇಲೆ ಪರಿಣಾಮ ಬೀಳಲಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಮರುಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ HDFC ಬ್ಯಾಂಕ್ ಕೂಡ ಇದೇ ಹಾದಿ ಹಿಡಿದಿದೆ. ವಿಶೇಷವಾಗಿ ರೆಗಾಲಿಯಾ ಗೋಲ್ಡ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇದರಿಂದ ಹೆಚ್ಚಿನ ಪರಿಣಾಮ ಎದುರಾಗಲಿದೆ.

ಹೊಸ ನಿಯಮಗಳ ಪ್ರಕಾರ, ದೇಶೀಯ ವಿಮಾನ ನಿಲ್ದಾಣಗಳಲ್ಲಿ ಉಚಿತ ಲಾಂಜ್ ಸೌಲಭ್ಯ ಪಡೆಯಲು ಕೇವಲ ಕಾರ್ಡ್ ಹೊಂದಿರುವುದೇ ಸಾಕಾಗುವುದಿಲ್ಲ. ಗ್ರಾಹಕರು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಮೊತ್ತವನ್ನು ಖರ್ಚು ಮಾಡಿದ್ದರೆ ಮಾತ್ರ ಮುಂದಿನ ತ್ರೈಮಾಸಿಕದಲ್ಲಿ ಉಚಿತ ಲಾಂಜ್ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.

ಉದಾಹರಣೆಗೆ, ಜುಲೈದಿಂದ ಸೆಪ್ಟೆಂಬರ್ 2026ರ ಅವಧಿಯಲ್ಲಿ ಲಾಂಜ್ ಸೌಲಭ್ಯ ಪಡೆಯಲು ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಕನಿಷ್ಠ ₹60,000 ವೆಚ್ಚ ಮಾಡಿರಬೇಕು. ಈ ಷರತ್ತು ಪೂರೈಸಿದವರಿಗೆ ಮಾತ್ರ ಉಚಿತ ದೇಶೀಯ ಲಾಂಜ್ ಪ್ರವೇಶ ಲಭ್ಯವಾಗಲಿದೆ. ಈ ಹಿಂದೆ ನೀಡಲಾಗುತ್ತಿದ್ದ ವೌಚರ್ ಆಧಾರಿತ ಲಾಂಜ್ ಸೌಲಭ್ಯವನ್ನು ಕೂಡ ಬ್ಯಾಂಕ್ ಸ್ಥಗಿತಗೊಳಿಸಿದೆ.

ಇದರ ಜೊತೆಗೆ, ರಿವಾರ್ಡ್ ಪಾಯಿಂಟ್ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ. ಅರ್ಹ ವಹಿವಾಟುಗಳಿಗೆ ನೀಡಲಾಗುವ ಪಾಯಿಂಟ್‌ಗಳ ಲೆಕ್ಕಾಚಾರವನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮಗಳ ಪ್ರಕಾರ ಖರ್ಚಿನ ಆಧಾರದ ಮೇಲೆ ಪಾಯಿಂಟ್‌ಗಳು ದೊರೆಯಲಿವೆ. ಇದರಿಂದ ಕೆಲವು ಗ್ರಾಹಕರಿಗೆ ಹಿಂದಿನಿಗಿಂತ ಕಡಿಮೆ ಲಾಭ ಸಿಗುವ ಸಾಧ್ಯತೆ ಇದೆ.

ವಿದೇಶಗಳಲ್ಲಿ ನೋಂದಾಯಿತ ವ್ಯಾಪಾರಿಗಳೊಂದಿಗೆ ಭಾರತದಲ್ಲೇ ರೂಪಾಯಿಯಲ್ಲಿ ನಡೆಸುವ ವಹಿವಾಟುಗಳ ಮೇಲಿನ DCC (ಡೈನಾಮಿಕ್ ಕರೆನ್ಸಿ ಕನ್ವರ್ಷನ್) ಶುಲ್ಕವನ್ನು 1.75 ಶೇಕಡಕ್ಕೆ ಪರಿಷ್ಕರಿಸಲಾಗಿದೆ. ರಿವಾರ್ಡ್ ಪಾಯಿಂಟ್‌ಗಳಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳು ಈಗಾಗಲೇ ಜಾರಿಯಾಗಿದ್ದು, ಉಳಿದ ಹೊಸ ನಿಯಮಗಳು ಜುಲೈ 1ರಿಂದ ಅನ್ವಯವಾಗಲಿವೆ.

ಕ್ರೆಡಿಟ್ ಕಾರ್ಡ್ ಬಳಕೆದಾರರು ಮುಂದಿನ ದಿನಗಳಲ್ಲಿ ಲಾಂಜ್ ಸೌಲಭ್ಯ ಮತ್ತು ರಿವಾರ್ಡ್ ಪಾಯಿಂಟ್‌ಗಳ ಪ್ರಯೋಜನ ಪಡೆಯಲು ತಮ್ಮ ಖರ್ಚಿನ ಮಾದರಿಯನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಬಹುದು.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories