ಸಣ್ಣ ಕಾರಣಗಳಿಂದ ಹೆಲ್ತ್ ಇನ್ಸೂರೆನ್ಸ್ ಕ್ಲೇಮ್ ರಿಜೆಕ್ಟ್ ಆಯ್ತಾ? ಹೀಗೆ ಮಾಡಿ
ಸಣ್ಣ ತಾಂತ್ರಿಕ ಕಾರಣಗಳನ್ನು ತೋರಿಸಿ ಹೆಲ್ತ್ ಇನ್ಸೂರೆನ್ಸ್ ಕ್ಲೇಮ್ ತಿರಸ್ಕರಿಸುವುದು ಸರಿಯಲ್ಲ ಎಂದು ಗ್ರಾಹಕ ಆಯೋಗ ಮಹತ್ವದ ತೀರ್ಪು ನೀಡಿದ್ದು, ಪಾಲಿಸೀದಾರರಿಗೆ ಇದು ದೊಡ್ಡ ನಿರಾಳತೆಯ ಸುದ್ದಿಯಾಗಿದೆ.

ಆರೋಗ್ಯ ವಿಮೆ ಪಡೆದ ಅನೇಕರು ಸಣ್ಣ ತಾಂತ್ರಿಕ ಕಾರಣಗಳಿಂದ ಕ್ಲೇಮ್ ತಿರಸ್ಕಾರವಾಗುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಉಳಿದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ, ದಾಖಲೆಗಳಲ್ಲಿ ಸಣ್ಣ ತಪ್ಪು ಅಥವಾ ನಿಯಮಗಳ ಅರ್ಥೈಸುವಿಕೆಯಲ್ಲಿ ಗೊಂದಲದಿಂದ ವಿಮಾ ಕಂಪನಿಗಳು ಹಲವು ಬಾರಿ ಕ್ಲೇಮ್ ನಿರಾಕರಿಸುತ್ತಿವೆ.
ಇಂತಹ ಪ್ರಕರಣವೊಂದರಲ್ಲಿ ಗ್ರಾಹಕರ ಪರವಾಗಿ ಮಹತ್ವದ ತೀರ್ಪು ಹೊರಬಿದ್ದಿದೆ. ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದ ಆರೋಗ್ಯ ವಿಮೆ ಕ್ಲೇಮ್‌ನ್ನು ವಿಮಾ ಕಂಪನಿ ತಿರಸ್ಕರಿಸಿದ್ದ ಪ್ರಕರಣವನ್ನು ಪರಿಶೀಲಿಸಿದ ಗ್ರಾಹಕ ವಿವಾದ ಪರಿಹಾರ ಆಯೋಗ, ಕೇವಲ ತಾಂತ್ರಿಕ ಕಾರಣ ಹೇಳಿ ಕ್ಲೇಮ್ ತಡೆಹಿಡಿಯುವುದು ನ್ಯಾಯಸಮ್ಮತವಲ್ಲ ಎಂದು ಸ್ಪಷ್ಟಪಡಿಸಿದೆ.
ಪಾಲಿಸೀದಾರರು ಸುಮಾರು 70 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಪಾಲಿಸಿಯಲ್ಲಿ 72 ಗಂಟೆಗಳ ಆಸ್ಪತ್ರೆ ವಾಸ ಕಡ್ಡಾಯ ಎಂಬ ಕಾರಣ ನೀಡಿ ಕಂಪನಿ ₹1 ಲಕ್ಷದ ಕ್ಲೇಮ್‌ನ್ನು ನಿರಾಕರಿಸಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಆಧುನಿಕ ವೈದ್ಯಕೀಯ ತಂತ್ರಜ್ಞಾನದಿಂದ ಚಿಕಿತ್ಸೆಯ ಅವಧಿ ಕಡಿಮೆಯಾಗುವುದು ಸಹಜ ಎಂದು ಅಭಿಪ್ರಾಯಪಟ್ಟಿದೆ.
ಚಿಕಿತ್ಸೆಯ ಅವಧಿ ಸ್ವಲ್ಪ ಕಡಿಮೆಯಿದೆ ಎಂಬ ಕಾರಣಕ್ಕೆ ರೋಗದ ತೀವ್ರತೆಯನ್ನು ಕಡಿಮೆ ಅಂದಾಜು ಮಾಡಲಾಗುವುದಿಲ್ಲ ಎಂದು ಆಯೋಗ ಹೇಳಿದೆ. ಕೇವಲ 2 ರಿಂದ 3 ಗಂಟೆಗಳ ವ್ಯತ್ಯಾಸವನ್ನು ಆಧಾರ ಮಾಡಿಕೊಂಡು ಕ್ಲೇಮ್ ತಿರಸ್ಕರಿಸುವುದು ಸರಿಯಲ್ಲ ಎಂದು ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ವಿಮಾ ಕಂಪನಿಗೆ ಪಾಲಿಸೀದಾರರಿಗೆ ₹1 ಲಕ್ಷ ವಿಮಾ ಮೊತ್ತದ ಜೊತೆಗೆ ₹10 ಸಾವಿರ ಪರಿಹಾರ ಹಾಗೂ ₹5 ಸಾವಿರ ಕಾನೂನು ವೆಚ್ಚ ಪಾವತಿಸಲು ಆದೇಶಿಸಲಾಗಿದೆ. ಜೊತೆಗೆ ದೂರು ದಾಖಲಿಸಿದ ದಿನಾಂಕದಿಂದ 9 ಶೇಕಡಾ ವಾರ್ಷಿಕ ಬಡ್ಡಿಯನ್ನೂ ನೀಡಬೇಕು ಎಂದು ಸೂಚಿಸಲಾಗಿದೆ.
ತಜ್ಞರ ಪ್ರಕಾರ, ಆರೋಗ್ಯ ವಿಮೆ ಪಾಲಿಸಿಗಳನ್ನು ಕೇವಲ ಕಠಿಣ ನಿಯಮಗಳ ಆಧಾರದ ಮೇಲೆ ಅಲ್ಲದೆ, ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅರ್ಥೈಸಬೇಕು. ವಿಮೆ ಪಡೆಯುವಾಗ ಪ್ರಯೋಜನಗಳ ಜೊತೆಗೆ ಷರತ್ತುಗಳು ಮತ್ತು ವಿನಾಯಿತಿಗಳನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದ್ದಾರೆ.



