ಕೇವಲ 2 ದಾಖಲೆ ಸಾಕು; ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ SBI ಖಾತೆ ತೆರೆಯಿರಿ
ಆಧಾರ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಸಾಕು, ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ SBI ಜೀರೋ ಬ್ಯಾಲೆನ್ಸ್ ಖಾತೆ ತೆರೆಯಬಹುದು. ವಿಡಿಯೋ ಕೆವೈಸಿ ಮೂಲಕ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ಆಗಿ ಪೂರ್ಣಗೊಳ್ಳಲಿದೆ.

ಬ್ಯಾಂಕ್ ಖಾತೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಸಂಬಳ ಪಡೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಹಣ ಸ್ವೀಕರಿಸುವವರೆಗೂ ಅನೇಕ ಕೆಲಸಗಳಿಗೆ ಅದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗ್ರಾಹಕರಿಗೆ ಮನೆಬಿಟ್ಟು ಹೊರಗೆ ಹೋಗದೆ ಖಾತೆ ತೆರೆಯುವ ಅವಕಾಶ ನೀಡುತ್ತಿದೆ.
SBI ತನ್ನ Insta Plus Savings Account ಸೇವೆಯ ಮೂಲಕ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶ ಕಲ್ಪಿಸಿದೆ. ಈ ಖಾತೆ ತೆರೆಯಲು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಮೊಬೈಲ್ ಆ್ಯಪ್ ಮತ್ತು ವಿಡಿಯೋ KYC ಮೂಲಕವೇ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ.
ಈ ಖಾತೆಯ ಪ್ರಮುಖ ವಿಶೇಷತೆ ಎಂದರೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ತಲೆನೋವು ಇಲ್ಲ. ಖಾತೆಯಲ್ಲಿ ಹಣ ಕಡಿಮೆ ಇದ್ದರೂ ಯಾವುದೇ ದಂಡ ಅಥವಾ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಬಳಸುವವರಿಗೆ ಇದು ಹೆಚ್ಚು ಉಪಯುಕ್ತವಾಗಿದೆ.
ಖಾತೆ ತೆರೆಯಲು ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಇದ್ದರೆ ಸಾಕು. ವಿಡಿಯೋ KYC ವೇಳೆ ಬಿಳಿ ಕಾಗದ ಮತ್ತು ನೀಲಿ ಅಥವಾ ಕಪ್ಪು ಪೆನ್ ಕೂಡ ಅಗತ್ಯವಾಗಬಹುದು.
ಖಾತೆ ತೆರೆಯಲು ಮೊದಲು Google Play Store ಅಥವಾ Apple App Store ನಿಂದ YONO SBI ಆ್ಯಪ್ ಡೌನ್‌ಲೋಡ್ ಮಾಡಬೇಕು. ಬಳಿಕ “Open Savings Account” ಆಯ್ಕೆಯನ್ನು ಆರಿಸಿ, Insta Plus Savings Account ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ದೃಢೀಕರಿಸಬೇಕು.
ಮುಂದಿನ ಹಂತದಲ್ಲಿ ಆಧಾರ್ ಮತ್ತು ಪ್ಯಾನ್ ವಿವರಗಳನ್ನು ಸಲ್ಲಿಸಬೇಕು. ಮಾಹಿತಿ ಪರಿಶೀಲನೆಯಾದ ನಂತರ ವಿಳಾಸ ಸೇರಿದಂತೆ ಅಗತ್ಯ ವೈಯಕ್ತಿಕ ವಿವರಗಳನ್ನು ನಮೂದಿಸಿ Video KYCಗಾಗಿ ಸಮಯ ಕಾಯ್ದಿರಿಸಬೇಕು.
ನಿಗದಿತ ಸಮಯದಲ್ಲಿ ಬ್ಯಾಂಕ್ ಅಧಿಕಾರಿ ವಿಡಿಯೋ ಕರೆ ಮೂಲಕ ಸಂಪರ್ಕಿಸಿ KYC ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಪ್ಯಾನ್ ಕಾರ್ಡ್ ತೋರಿಸಿದ ಬಳಿಕ ಪರಿಶೀಲನೆ ಯಶಸ್ವಿಯಾದರೆ ಖಾತೆ ಸಕ್ರಿಯಗೊಳ್ಳುತ್ತದೆ.
ಈ ಖಾತೆಯೊಂದಿಗೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, UPI ಸೇವೆ, YONO SBI ಆ್ಯಪ್ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯಗಳು ದೊರೆಯುತ್ತವೆ. ಹಣ ವರ್ಗಾವಣೆ, ಬ್ಯಾಲೆನ್ಸ್ ಪರಿಶೀಲನೆ, ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಸೇರಿದಂತೆ ಹಲವು ಬ್ಯಾಂಕಿಂಗ್ ಸೇವೆಗಳನ್ನು ಮನೆಯಲ್ಲೇ ಕುಳಿತು ಬಳಸಬಹುದು.
ಇದಲ್ಲದೆ, ಸರ್ಕಾರಿ ಯೋಜನೆಗಳ ಹಣವನ್ನು ನೇರವಾಗಿ ಖಾತೆಗೆ ಪಡೆಯುವ ಸೌಲಭ್ಯವೂ ಲಭ್ಯವಿದೆ. ಹೀಗಾಗಿ ಯಾವುದೇ ಕಾಗದದ ಕೆಲಸವಿಲ್ಲದೆ, ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆ ಆರಂಭಿಸಲು ಬಯಸುವವರಿಗೆ SBIಯ ಈ ಡಿಜಿಟಲ್ ಸೇವೆ ಉತ್ತಮ ಆಯ್ಕೆಯಾಗಿದೆ.



