ಪೆಟ್ರೋಲ್ ಖರೀದಿಗೆ ಹೊಸ ನಿಯಮಗಳು! ಒಂದು ದಿನದಲ್ಲಿ ಎಷ್ಟು ಲೀಟರ್ ಪೆಟ್ರೋಲ್ ಖರೀದಿಸಬಹುದು?
ಇಂಧನ ಕೊರತೆ ಕುರಿತ ಆತಂಕದ ನಡುವೆ ಜನರು ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹಿಸಲು ಮುಂದಾಗುತ್ತಿದ್ದಾರೆ. ಆದರೆ ಒಂದು ದಿನದಲ್ಲಿ ಎಷ್ಟು ಲೀಟರ್ ಖರೀದಿಸಬಹುದು ಎಂಬುದಕ್ಕೆ ಕೆಲವು ನಿಯಮಗಳು ಜಾರಿಯಲ್ಲಿವೆ.

ದೇಶದ ಹಲವೆಡೆ ಇಂಧನ ಕೊರತೆ ಕುರಿತ ಸುದ್ದಿಗಳು ಹರಡುತ್ತಿರುವ ಹಿನ್ನೆಲೆ ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳ ಸಾಲು ಹೆಚ್ಚಾಗಿದೆ. ಕೆಲವರು ತಮ್ಮ ಕಾರು ಹಾಗೂ ಬೈಕ್ ಟ್ಯಾಂಕ್ಗಳನ್ನು ಪೂರ್ಣವಾಗಿ ತುಂಬಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಕ್ಯಾನ್ ಮತ್ತು ಡ್ರಮ್ಗಳೊಂದಿಗೆ ಬಂಕ್ಗಳಿಗೆ ಬರುತ್ತಿರುವ ದೃಶ್ಯ ಕಂಡುಬರುತ್ತಿದೆ.
ಸಾಮಾನ್ಯವಾಗಿ ಸ್ವಂತ ವಾಹನದಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವುದಕ್ಕೆ ಕಾನೂನುಬದ್ಧ ಮಿತಿ ಇರುವುದಿಲ್ಲ. ಬೈಕ್ ಅಥವಾ ಕಾರಿನ ಟ್ಯಾಂಕ್ಗೆ ಬೇಕಾದಷ್ಟು ಬಾರಿ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಬಹುದು. ಆದರೆ ತುರ್ತು ಪರಿಸ್ಥಿತಿ ಅಥವಾ ಇಂಧನ ಕೊರತೆ ಉಂಟಾದ ಸಂದರ್ಭಗಳಲ್ಲಿ ಸ್ಥಳೀಯ ಆಡಳಿತ ತಾತ್ಕಾಲಿಕ ಮಿತಿಗಳನ್ನು ವಿಧಿಸುವ ಸಾಧ್ಯತೆ ಇರುತ್ತದೆ.
‘ಪೆಟ್ರೋಲಿಯಂ ನಿಯಮಗಳು 2002’ ಪ್ರಕಾರ, ಸಾಮಾನ್ಯ ಗ್ರಾಹಕರು ಒಂದು ದಿನದಲ್ಲಿ ನೇರವಾಗಿ 200 ಲೀಟರ್ಗಿಂತ ಹೆಚ್ಚು ಪೆಟ್ರೋಲ್ ಖರೀದಿಸಬಾರದು. ತುರ್ತು ಅವಶ್ಯಕತೆ ಇದ್ದರೆ 1 ರಿಂದ 5 ಲೀಟರ್ ಹೆಚ್ಚುವರಿ ಇಂಧನವನ್ನು ಪ್ರತ್ಯೇಕವಾಗಿ ಪಡೆಯಬಹುದು. ಆದರೆ ಅದನ್ನು ಪ್ಲಾಸ್ಟಿಕ್ ಬಾಟಲ್ನಲ್ಲಿ ನೀಡಲು ಅವಕಾಶ ಇಲ್ಲ.
ಭದ್ರತಾ ದೃಷ್ಟಿಯಿಂದ ಸ್ಟೀಲ್ ಅಥವಾ ದಪ್ಪ ಲೋಹದ ಅನುಮೋದಿತ ಕ್ಯಾನ್ಗಳನ್ನು ಮಾತ್ರ ಬಳಸಬೇಕು ಎಂದು ನಿಯಮಗಳು ಹೇಳುತ್ತವೆ. ಮನೆ ಬಳಕೆ, ಕೃಷಿ ಅಥವಾ ಜನರೇಟರ್ಗಳಿಗೆ 20ರಿಂದ 200 ಲೀಟರ್ವರೆಗೆ ಇಂಧನ ಬೇಕಾದರೆ ಅದರ ಕಾರಣವನ್ನು ಪೆಟ್ರೋಲ್ ಬಂಕ್ಗೆ ಲಿಖಿತವಾಗಿ ತಿಳಿಸಬೇಕು.
ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಇಂಧನ ಸಂಗ್ರಹಿಸಲು ಬಯಸುವವರು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಯಿಂದ ಅಧಿಕೃತ ಸ್ಟೋರೇಜ್ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಈ ಪರವಾನಗಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ.
ಸರ್ಕಾರ ಈಗಾಗಲೇ ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ವದಂತಿಗಳಿಗೆ ಕಿವಿಗೊಡದೆ ಅಗತ್ಯ ಮಟ್ಟಿಗೆ ಮಾತ್ರ ಪೆಟ್ರೋಲ್ ಖರೀದಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮನೆ ಅಥವಾ ಗೋದಾಮುಗಳಲ್ಲಿ ಅತಿಯಾಗಿ ಇಂಧನ ಸಂಗ್ರಹಿಸುವುದು ಅಪಾಯಕಾರಿ ಹಾಗೂ ಜೀವಕ್ಕೆ ಹಾನಿಕಾರಕವಾಗಬಹುದು ಎಂಬ ಎಚ್ಚರಿಕೆಯೂ ನೀಡಲಾಗಿದೆ.



