ತಂದೆಯಾಗುತ್ತಿದ್ದಾರೆ ಡಾಲಿ ಧನಂಜಯ್; ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡ ನಟ!
Actor Daali Dhananjay Good News: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಹಾಗೂ ನಿರ್ಮಾಪಕ ಡಾಲಿ ಧನಂಜಯ್ ಅವರು ಶೀಘ್ರದಲ್ಲೇ ತಂದೆಯಾಗುತ್ತಿದ್ದಾರೆ. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಧನಂಜಯ್, ವೇದಿಕೆಯ ಮೇಲೆ ಈ ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ.
“ನಮ್ಮ ಕುಟುಂಬಕ್ಕೆ ಶೀಘ್ರದಲ್ಲೇ ಹೊಸ ಸದಸ್ಯನ ಸೇರ್ಪಡೆಯಾಗುತ್ತಿದೆ” ಎಂದು ಹೇಳುವ ಮೂಲಕ ತಾವು ತಂದೆಯಾಗುತ್ತಿರುವ ಸುದ್ದಿಯನ್ನು ಅಧಿಕೃತಗೊಳಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಧನಂಜಯ್ ಅವರು ಫೆಬ್ರವರಿ 16, 2025 ರಂದು ಮೈಸೂರಿನಲ್ಲಿ ವೈದ್ಯೆಯಾಗಿರುವ ಧನ್ಯತಾ ಅವರೊಂದಿಗೆ ಹಸೆಮಣೆ ಏರಿದ್ದರು. ಅತ್ಯಂತ ಅದ್ದೂರಿಯಾಗಿ ನಡೆದ ಈ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್‌ವುಡ್‌ನ ತಾರೆಯರು ಹಾಗೂ ರಾಜಕೀಯ ಗಣ್ಯರು ಸಾಕ್ಷಿಯಾಗಿದ್ದರು. ವಿವಾಹವಾಗಿ ಒಂದು ವರ್ಷ ತುಂಬುವ ಮೊದಲೇ ಈ ದಂಪತಿ ಈಗ ಪೋಷಕರಾಗುತ್ತಿರುವ ಸಾರ್ಥಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
‘ಭಾಗ್ಯಲಕ್ಷ್ಮಿ’ ಸುಷ್ಮಾ ರಾವ್ ರಹಸ್ಯ ಬಯಲು! ಪತಿ ಮತ್ತು ಮಗನನ್ನು ನೋಡಿ ಅಭಿಮಾನಿಗಳು ಅಚ್ಚರಿ
ಸಿನಿಮಾ ಹಾಗೂ ನಿರ್ಮಾಣದಲ್ಲಿ ಬ್ಯುಸಿ
ಒಂದೆಡೆ ವೈಯಕ್ತಿಕ ಜೀವನದ ಖುಷಿಯಲ್ಲಿದ್ದರೆ, ಇನ್ನೊಂದೆಡೆ ವೃತ್ತಿಜೀವನದಲ್ಲೂ ಧನಂಜಯ್ ಅಷ್ಟೇ ಸಕ್ರಿಯರಾಗಿದ್ದಾರೆ. ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಅವರು, ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟನೆಯ ಜೊತೆಗೆ ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಧನಂಜಯ್, ತಮ್ಮ ಪ್ರತಿಭೆಯಿಂದಲೇ ಕನ್ನಡಿಗರ ಮನೆಮಾತಾಗಿದ್ದಾರೆ.



