ಶಿಲ್ಪಾ ಶೆಟ್ಟಿ ನೆರಳಲ್ಲಿ ಬದುಕೋದು ಕಷ್ಟವಿದೆ: ಬಿಗ್ ಬಾಸ್ ನಲ್ಲಿ ಕಣ್ಣೀರಿಟ್ಟ ಶಮಿತಾ ಶೆಟ್ಟಿ!

ಬಾಲಿವುಡ್ ನಟಿ ಹಾಗೂ ಮಾಡೆಲ್ ಶಮಿತಾ ಶೆಟ್ಟಿ ಅಕ್ಕ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಎದುರಾದ ಸಂಕಷ್ಟದ ಮಧ್ಯೆಯೂ ಬಿಗ್ ಬಾಸ್ ಅಂಗಳ ತಲುಪಿದ್ದಾರೆ. ಟಾಸ್ಕ್ ವೇಳೆ ಭಾವುಕರಾದ ಶಮಿತಾ ಶೆಟ್ಟಿ ತಮ್ಮ ಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ.

ಟಾಸ್ಕ್ ಒಂದರ ವೇಳೆ ಶಮಿತಾ ಆಟವನ್ನು ಹೊಗಳಿದ ನಿರೂಪಕ ಕರಣ್ ಜೋಹರ್ ನಿಮ್ಮ ಮನಸ್ಸಿನಲ್ಲಿರೋ ನೋವನ್ನು ನೀವು ಹಂಚಿಕೊಳ್ಳಬಹುದು ಎಂದರು. ಈ ಮಾತಿಗೆ ಕಣ್ಣಿರಿಟ್ಟ ಶಮಿತಾ ಶೆಟ್ಟಿ, ಎಷ್ಟು ಹೋರಾಟ ಮಾಡಿದರೂ ಶಿಲ್ಪಾ ಶೆಟ್ಟಿ ಸಹೋದರಿ, ಸ್ಟಾರ್ ನಟಿಯ ತಂಗಿ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗಲಿಲ್ಲ ಎಂದು ಭಾವುಕರಾಗಿದ್ದಾರೆ.

ಇಷ್ಟು ವರ್ಷಗಳಿಂದಲೂ ಜನರು ನನ್ನನ್ನು ಶಿಲ್ಪಾ ಶೆಟ್ಟಿ ತಂಗಿ ಎಂದೇ ಗುರುತಿಸಿದ್ದರಿಂದ ನನ್ನನ್ನು ನಾನು ಹುಡುಕಿಕೊಳ್ಳುವ ಹಠ ಹೆಚ್ಚಾಯಿತು. ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಹಠದಿಂದ ಕೆಲಸ ಮಾಡಿದೆ. ಬಾಲಿವುಡ್ ನಲ್ಲಿ ಕೆಲಸ ಮಾಡಿದ ಎರಡು ದಶಕ ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು ಎಂದಿದ್ದಾರೆ.

ಶಿಲ್ಪಾ ಶೆಟ್ಟಿ ತಂಗಿಯಾಗಿ ಮಾತ್ರ ಗುರುತಿಸಿಕೊಂಡು, ಸ್ವತಂತ್ರ ವ್ಯಕ್ತಿತ್ವವಿಲ್ಲದೇ ಬದುಕೋದು ಕಷ್ಟ ಎಂದು ಶಮಿತಾ ದುಃಖ ತೋಡಿಕೊಂಡಿದ್ದಾರೆ. 2000 ರಲ್ಲಿ ಮೊಹಬ್ಬತೆ ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಶಮಿತಾ, ತೆಲುಗು,ತಮಿಳಿನಲ್ಲಿ ನಟಿಸಿದ್ದರೂ ಹೇಳಿಕೊಳ್ಳುವಂತೆ ಹೆಸರು ಗಳಿಸಲು ಸಾಧ್ಯವಾಗಲಿಲ್ಲ.

2007 ರ ಬಳಿಕ ಹಿಂದಿಯಲ್ಲಿ ಅವಕಾಶವೇ ಇಲ್ಲದಂತ ಸ್ಥಿತಿ ತಲುಪಿದ ಶಮಿತಾ, ವೆಬ್ ಸೀರಿಸ್, ಕಿರುತೆರೆ ಹಾಗೂ ಬಿಗ್ ಬಾಸ್ ಮೂಲಕ ಚಾಲ್ತಿಯಲ್ಲಿದ್ದಾರೆ.

Comments are closed.