ಚಿಕ್ಕಮಗಳೂರಿನ ನಿರ್ದೇಶಕ ಗಿಲ್ಲಿ ವೆಂಕಟೇಶ್ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆ!

ಚಿಕ್ಕಮಗಳೂರಿನ ​ಗಿಲ್ಲಿ ವೆಂಕಟೇಶ್ ನಿರ್ದೇಶನದ ಬಹುನಿರೀಕ್ಷಿತ ‘ಕರಿಕಾಡ’ ಚಿತ್ರವು ಫೆಬ್ರವರಿ 6ರಂದು ತೆರೆಗೆ ಬರಲು ಸಜ್ಜಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಸಿನಿಮಾ, ಕರ್ನಾಟಕದಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

​ಚಿತ್ರದ ಟೀಸರ್ ಈಗಾಗಲೇ ಕುತೂಹಲ ಮೂಡಿಸಿದ್ದು, ಇದೊಂದು ಪಕ್ಕಾ ಹಳ್ಳಿ ಸೊಗಡಿನ ಅಡ್ವೆಂಚರಸ್ ಸಿನಿಮಾ ಎಂಬ ಸುಳಿವು ನೀಡಿದೆ. ಕಾಡಿನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಪ್ರೀತಿ, ದ್ವೇಷ ಹಾಗೂ ಪ್ರತೀಕಾರದ ರೋಚಕ ಕ್ಷಣಗಳಿವೆ. ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಈ ಚಿತ್ರದ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಇದೆ.

​ಚಿತ್ರದಲ್ಲಿ ನಟರಾಜ್ ನಾಯಕನಾಗಿ ನಟಿಸಿದ್ದು, ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ಒಟ್ಟು ನಾಲ್ವರು ನಾಯಕಿಯರಿದ್ದು, ಉಳಿದವರ ಹೆಸರನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಇನ್ನು ಚಿತ್ರದಲ್ಲಿ ಆರು ಸಾಹಸ ದೃಶ್ಯಗಳು ಹಾಗೂ ಏಳು ಹಾಡುಗಳಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಭರವಸೆ ನೀಡಿದ್ದಾರೆ ನಿರ್ದೇಶಕರು.

​ಸಂಗೀತದ ವಿಚಾರದಲ್ಲಿ ‘ಕರಿಕಾಡ’ ಈಗಾಗಲೇ ಸೌಂಡ್ ಮಾಡುತ್ತಿದೆ. ಅತಿಶಯ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಯೋಜಿಸಿರುವ ‘ರತುನಿ ರತುನಿ’ ಮತ್ತು ‘ಕಬ್ಬಿನ ಜಲ್ಲೆ’ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಬೆನ್ನಲ್ಲೇ ಜನವರಿ 28ರಂದು ‘ನೀ ಯಾರೇ ನನಗೆ’ ಎಂಬ ಮೂರನೇ ಹಾಡು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ವಂದೇ ಮಾತರಂ ಗೀತೆಗೆ ಶೀಘ್ರದಲ್ಲೇ ರಾಷ್ಟ್ರಗೀತೆ ಸ್ಥಾನಮಾನ..?

​ಚಿಕ್ಕಮಗಳೂರು ಜಿಲ್ಲೆಯ ಸರಪನಹಳ್ಳಿಯ ಕೃಷಿ ಕುಟುಂಬದಿಂದ ಬಂದ ಗಿಲ್ಲಿ ವೆಂಕಟೇಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಿದ್ಧಿ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ದೀಪ್ತಿ ದಾಮೋದರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories