ಗಡಿಯಾರ ತಿರುಗಿಸೋದಕ್ಕೆ ಹೊರಟ ಕುಂದಾಪುರದ ಹುಡುಗ

0

ಹುಟ್ಟಿದ್ದು ಕರಾವಳಿಯಲ್ಲಿ… ಓದಿದ್ದು ಇಂಜಿನಿಯರಿಂಗ್ ಪದವಿ.. ಆಗಿದ್ದು ಸಿನಿಮಾ ನಿರ್ದೇಶಕ, ನಿರ್ಮಾಪಕ. ಹೌದು, ಇವರು ಬೇರಾರೂ ಅಲ್ಲಾ ಸ್ಯಾಂಡಲ್ ವುಡ್ ನ ಯುವ ನಿರ್ದೇಶಕ, ನಿರ್ಮಾಪಕ ಪ್ರಬೀಕ್ ಮೊಗವೀರ್…

ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿರೋ ಪ್ರಬೀಕ್ ಮೊಗವೀರ್ ಸದ್ಯ ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕರಲ್ಲೊಬ್ಬರು. ಬಾಲ್ಯದಿಂದಲೂ ಸಿನಿಮಾರಂಗದತ್ತ ಆಸಕ್ತಿಯನ್ನು ಹೊಂದಿದ್ದ ಪ್ರಬೀಕ್ ಮೊಗವೀರ್ ಅವರು ಇದೀಗ ಸ್ಯಾಂಡಲ್ ವುಡ್ ನಲ್ಲಿ ದಿನೇ ದಿನೇ ಪ್ರಖ್ಯಾತಿಯನ್ನು ಗಳಿಸುತ್ತಿದ್ದಾರೆ.

ಪ್ರಬೀಕ್ ಮೊಗವೀರ್ ಓರ್ವ ಕನಸುಗಾರ. ಬಾಲ್ಯದಲ್ಲಿ ಕಂಡಿದ್ದ ಕನಸುಗಳನ್ನು ಇದೀಗ ಒಂದೊಂದಾಗಿಯೇ ನನಸು ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಡಾ.ಅಂಬೇಡ್ಕರ್ ಟೆಕ್ನಾಲಜಿ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ವಿಶಿಷ್ಟ ಶ್ರೇಣಿಯಲ್ಲಿ ಪಾಸ್ ಮಾಡುತ್ತಲೇ ಪ್ರತಿಷ್ಠಿತ 5 ಕಂಪೆನಿಗಳಿಂದ ಉದ್ಯೋಗಕ್ಕೆ ಕರೆ ಬಂದಿತ್ತು. ಒಂದೊಮ್ಮೆ ಇಂಜಿನಿಯರಿಂಗ್ ಉದ್ಯೋಗವನ್ನು ಆರಿಸಿಕೊಂಡಿದ್ರೆ ಇಂದು ಪ್ರತಿಷ್ಠಿತ ಕಂಪೆನಿಯ ಉನ್ನತ ಹುದ್ದೆಯಲ್ಲಿ ಇರಬಹುದಾಗಿತ್ತು. ಆದ್ರೆ ಪ್ರಬೀಕ್ ಮೊಗವೀರ್ ಇಂಜಿನಿಯರಿಂಗ್ ಉದ್ಯೋಗವನ್ನು ಆರಿಸಿಕೊಳ್ಳದೇ ಸ್ಯಾಂಡಲ್ ವುಡ್ ನತ್ತ ಮುಖಮಾಡಿದ್ರು.

ಕಾಲೇಜು ದಿನಗಳಿಂದಲೇ ಲೇಖನಿ ಹಿಡಿದಿದ್ದ ಪ್ರಬೀಕ್ ಮೊಗವೀರ್ ಒಂದಿಷ್ಟು ಪತ್ರಿಕೆಗಳಲ್ಲಿಯೂ ಕೆಲಸ ಮಾಡಿದ್ದಾರೆ. ಉದಯ ನ್ಯೂಸ್, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು. ಪತ್ರಿಕೋದ್ಯಮದಲ್ಲಿಯೂ ಆಸಕ್ತಿಯನ್ನು ಹೊಂದಿದ್ದ ಪ್ರಬೀಕ್ ಮೊಗವೀರ್ ಅವರು ಇದೀಗ ಸುವರ್ಣ ಆತ್ಮವಾಣಿ ಅನ್ನೋ ಮಾಸಿಕ ಪತ್ರಿಕೆಯ ಮ್ಯಾನೇಜಿಂಗ್ ಡೈರೆಕ್ಟರ್ ಕಂ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪತ್ರಿಕೋದ್ಯಮದ ಜೊತೆ ಜೊತೆಗೆ ಸಿನಿಮಾದರಂಗದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿರೋ ಪ್ರಬೀಕ್ , ಈಗಾಗಲೇ 15ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶನ ಮಾಡಿರೋ ಅನುಭವ ಹೊಂದಿದ್ದಾರೆ.

ಇದೀಗ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಗಡಿಯಾರ ಸಿನಿಮಾದಲ್ಲಿ ನಿರ್ಮಾಣದ ಜೊತೆಗೆ ನಿರ್ದೇಶನ ಹೊಣೆಯನ್ನೂ ಹೊತ್ತಿದ್ದಾರೆ. ಪ್ರಬೀಕ್ ಅವರ ಕನಸಿನ ಸಿನಿಮಾ ಗಡಿಯಾರ ತೆರೆಗೆ ಬರೋದಕ್ಕೆ ರೆಡಿಯಾಗ್ತಿದೆ. ಗಡಿಯಾರ ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಲಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಿದ್ದವಾಗುತ್ತಿದೆ.

ಅಲ್ಲದೇ ಬೋಜ್ ಪುರಿ, ಮರಾಠಿ ಹಾಗೂ ಬೆಂಗಾಲಿ ಭಾಷೆಗೂ ಡಬ್ ಮಾಡೋ ಪ್ಲಾನ್ ನಲ್ಲಿದ್ದಾರೆ ಪ್ರಬೀಕ್. ತನ್ನಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡಿರೋ ಪ್ರಬೀಕ್ ಮೊಗವೀರ್ ಗಡಿಯಾರ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಸಿನಿಮಾವೊಂದನ್ನು ಕೊಡಲು ರೆಡಿಯಾಗಿದ್ದಾರೆ.

ಗಡಿಯಾರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪೋಸ್ಟರ್ ಮೂಲಕ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆಯನ್ನು ಸೃಷ್ಟಿಸಿರೋ ಗಡಿಯಾರ ಬಹು ತಾರೆಯ ಸಿನಿಮಾವೂ ಹೌದು, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ಗಡಿಯಾರ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಯಶ್ ಶೆಟ್ಟಿ, ರಾಜ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ, ಶರೆತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ರಿಹಾಜ್ ಎಂ.ಟಿ., ಗೌರಿಶಂಕರ್, ಪ್ರದೀಪ್ ಪೂಜಾರಿ, ಗಣೇಶ್ ರಾವ್, ಮನದೀಪ್ ರೈ, ರಾಧಾ ರಾಮಚಂದ್ರ, ಪ್ರಣಯ ಮೂರ್ತಿ, ಎಸಿಪಿ ಚಬ್ಬಿ, ವಿನಯ್ ಕುಮಾರ್ ರಾವ್, ಲೀಲಾ ಮೋಹನ್ ಸೇರಿದಂತೆ ಬಹುತಾರಾಗಣವನ್ನಿಟ್ಟುಕೊಂಡು ಗಡಿಯಾರ ಸಿನಿಮಾ ತಯಾರಿಸಿದ್ದಾರೆ.

ಚಿತ್ರಕ್ಕೆ ಯಾವುದರಲ್ಲೂ ಕೊರತೆಯಾಗಬಾರದು ಅನ್ನೋ ಕಾರಣಕ್ಕೆ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ. ಇಷ್ಟೇ ಅಲ್ಲಾ ರಾಘವ್ ಸುಭಾಷ್ ಸಂಗೀತದಲ್ಲಿ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ಶ್ಯಾಮ್ ಸಿಂಧನೂರ್ ಛಾಯಾಗ್ರಹಣ, ಎನ್ ಎಂ.ವಿಶ್ವ ಸಂಕಲನದಲ್ಲಿ ಗಡಿಯಾರ ಅದ್ಬುತವಾಗಿ ಮೂಡಿಬಂದಿದೆ. ಹೇಮಂತ್, ವ್ಯಾಸರಾಜ್, ಅನುರಾಧಾ ಭಟ್, ಅಪೂರ್ವ ಹಾಗೂ ಶ್ರೀ ಕುಮಾರ್ ಧ್ವನಿಯಲ್ಲಿ ಹಾಡುಗಳು ಗಿವಿಗಿಂಪು ನೀಡಲಿದೆ.

ಕನ್ನಡ ಸಿನಿಮಾರಂಗದಲ್ಲಿಯೇ ಮೊದಲ ಬಾರಿಗೆ ಕಾಮಿಡಿ, ಮಾಸ್, ಲವ್, ಹಿಸ್ಟಾರಿಕಲ್, ಹಾರರ್ ಹಾಗೂ ಥ್ರಿಲ್ಲರ್ ಸಿನಿಮಾವನ್ನು ಪ್ರಬೀಕ್ ಮೊಗವೀರ್ ಅವರು ಸಿದ್ದಪಡಿಸಿದ್ದಾರೆ. ಗಡಿಯಾರ ಸದ್ಯ ಸೆನ್ಸಾರ್ ಹಂತದಲ್ಲಿದ್ದು, ಇದೇ ತಿಂಗಳಲ್ಲಿ ಸಿನಿಮಾ ಟ್ರೈಲರ್ ಬಿಡುಗಡೆ ಮಾಡೋದಕ್ಕೆ ಪ್ರಬೀಕ್ ಸಿದ್ದತೆ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರೋ ಗಡಿಯಾರ ಸಿನಿಮಾಕ್ಕೆ ತಮಿಳು, ತೆಲುಗು, ಮಲಯಾಲಂ ಹಾಗೂ ಹಿಂದಿ ಭಾಷೆಯಿಂದಲೂ ಬಾರೀ ಬೇಡಿಕೆ ಬರ್ತಿದೆ. ಗಡಿಯಾರ ಸಿನಿಮಾ ನಂತರ ನೈಜ ಕಥೆಯೊಂದನ್ನ ತೆರೆಯ ಮೇಲೆ ತರೋದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇಂಜಿನಿಯರಿಂಗ್ ಪದವಿಧರರಾದ್ರೂ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡಿರೋ ಪ್ರಬೀಕ್ ಮೊಗವೀರ್, ಇನ್ನಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಲಿ. ಗಡಿಯಾರ ಸಿನಿಮಾ ಈ ವರ್ಷದ ಶ್ರೇಷ್ಟ ಸಿನಿಮವಾಗಿ ಹೊರಹೊಮ್ಮಲಿ ಅನ್ನೋದೇ ನ್ಯೂಸ್ ನೆಕ್ಸ್ಟ್ ಆಶಯ.

Leave A Reply

Your email address will not be published.