ಸಾಹಸಸಿಂಹ ಡಾ. ವಿಷ್ಣುವರ್ಧನ್ ಬ್ಯಾನರ್‌ಗೆ ವಿದ್ಯಾರ್ಥಿಗಳಿಂದ ಅವಮಾನ; ಕೈಮುಗಿದು ಕ್ಷಮೆ ಕೋರಿದ ಪಾಲಕರು
Dr Vishnuvardhan: ಬೆಂಗಳೂರು: ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ವಿಷ್ಣುವರ್ಧನ್ ಅವರ ಭಾವಚಿತ್ರವಿರುವ ಬ್ಯಾನರ್‌ಗೆ ಅಪಮಾನ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಚಲನ ಮೂಡಿಸಿದೆ. ಈ ವಿದ್ಯಾರ್ಥಿಗಳು ವಿಷ್ಣು ದಾದಾ ಅವರ ಬ್ಯಾನರ್ ಮುಂದೆ ನಿಂತು ತಿಂಡಿ ತಿನ್ನುತ್ತಾ, ಅತ್ಯಂತ ಅಸಭ್ಯವಾಗಿ ಬಾಯಿ ತೆರೆಯುವ ಸನ್ನೆಗಳನ್ನು ಮಾಡುವ ಮೂಲಕ ನಟನ ಘನತೆಗೆ ಚ್ಯುತಿ ತರುವಂತಹ ಕೃತ್ಯ ಎಸಗಿದ್ದರು.
ಈ ಇಡೀ ಘಟನೆಯನ್ನು ವಿಡಿಯೋ ಮಾಡಿ, ಅದನ್ನು ಯಾವುದೋ ದೊಡ್ಡ ಸಾಹಸವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕನ್ನಡಿಗರು ಮತ್ತು ವಿಷ್ಣು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅವಹೇಳನಕಾರಿ ಕೃತ್ಯದ ವಿರುದ್ಧ ಸಿಡಿದೆದ್ದ ವಿಷ್ಣು ಅಭಿಮಾನಿಗಳು ತಕ್ಷಣವೇ ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ದೂರಿನ ಗಾಂಭೀರ್ಯವನ್ನು ಅರಿತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ವಿಡಿಯೋ ಆಧರಿಸಿ ಕೃತ್ಯ ಎಸಗಿದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆಯ ವೇಳೆ ಈ ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಸಿನವರೆಂದು ತಿಳಿದುಬಂದಿದೆ.
ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ಕೊಡಿ : ಆರ್. ಅಶೋಕ್ ಆಗ್ರಹ
ಪೊಲೀಸರು ಅವರಿಗೆ ಕಾನೂನಿನ ಅರಿವು ಮೂಡಿಸಿ, ಒಬ್ಬ ಮಹಾನ್ ನಟನಿಗೆ ಗೌರವ ನೀಡುವ ಬಗ್ಗೆ ಬುದ್ಧಿವಾದ ಹೇಳಿದ್ದಾರೆ. ನಂತರ ವಿದ್ಯಾರ್ಥಿಗಳಿಂದ ಲಿಖಿತ ರೂಪದಲ್ಲಿ ತಪ್ಪೊಪ್ಪಿಗೆ ಪತ್ರವನ್ನು ಬರೆಯಿಸಿಕೊಳ್ಳಲಾಗಿದೆ.
ತಮ್ಮ ಮಕ್ಕಳು ಮಾಡಿದ ಇಂತಹ ಕೀಳು ಮಟ್ಟದ ಕೆಲಸದಿಂದ ಪೋಷಕರು ಕೂಡ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಠಾಣೆಗೆ ಆಗಮಿಸಿದ ಪೋಷಕರು, ತಮ್ಮ ಮಕ್ಕಳ ವರ್ತನೆಗೆ ವಿಷ್ಣು ಅಭಿಮಾನಿಗಳ ಸಮ್ಮುಖದಲ್ಲಿಯೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗೆ ಹಿರಿಯ ನಟರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯ ಬಗ್ಗೆ ಅರಿವಿಲ್ಲದಿರುವುದು ಈ ಘಟನೆಯಿಂದ ಸ್ಪಷ್ಟವಾಗುತ್ತಿದೆ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.
ಒಬ್ಬ ವ್ಯಕ್ತಿಯ ಸಾಧನೆ ಅಥವಾ ಅವರ ಸ್ಥಾನಮಾನದ ಬಗ್ಗೆ ಗೌರವವಿಲ್ಲದಿದ್ದರೆ ಕನಿಷ್ಠ ಪಕ್ಷ ಅಪಮಾನ ಮಾಡುವ ಹಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ ಪೊಲೀಸರು ಎಚ್ಚರಿಕೆ ನೀಡಿ ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.



