ಕೋಮುಭಾವನೆ ಕೆರಳಿಸ್ತಾರಂತೆ ಕಂಗನಾ… ನ್ಯಾಯಾಲಯದ ಮೊರೆ ಹೋದ ನಿರ್ದೇಶಕ…!!

ಮುಂಬೈ: ಇತ್ತೀಚಿಗಷ್ಟೇ ಕರ್ನಾಟಕದ ತುಮಕೂರಿನಲ್ಲಿ ಕಂಗನಾ ವಿರುದ್ಧ ಒಂದು ಎಫ್ ಆಯ್ ಆರ್ ದಾಖಲಾದ ಬೆನ್ನಲ್ಲೇ ಮತ್ತೊಂದು ಕೇಸ್ ದಾಖಲಿಸಲು ಬಾಂದ್ರಾದ ನ್ಯಾಯಾಲಯ ನಿರ್ದೇಶನ ನೀಡಿದ್ದು ಬಾಲಿವುಡ್ ಬ್ರೇವ್ ಗರ್ಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾಲಿವುಡ್ ನ ಕಾಸ್ಟಿಂಗ್ ನಿರ್ದೇಶಕ ಸಾಹಿಲ್ ಅಶ್ರಫ್ ಅಲಿ ಸೈಯದ್ ಬಾಂದ್ರಾದ ಮೆಟ್ರೋ ಪಾಲಿಟಿನ್ ನ್ಯಾಯಾಲಯಕ್ಕೆ ದೂರು‌ ನೀಡಿದ್ದು, ಕಂಗನಾ ತಮ್ಮ ಟ್ವೀಟರ್ ಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸ್ವಜನ ಪಕ್ಷಪಾತ ಹಾಗೂ ಫೆವರಿಟಿಸಂ ಬಗ್ಗೆ ಅತ್ಯಂತ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ಕಲಾವಿದರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದು ಕೆಲ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ.

ಪ್ರಕರಣ ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಜಯದೇವ್ ವೈ ಗುಲೆ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ.ಕಂಗನಾ ವಿರುದ್ಧ ಐಪಿಸಿ ಸೆಕ್ಷನ್ 153 ಎ, 295 ಎ, 124 ಎ ಅಡಿಯಲ್ಲಿ, ಶತ್ರುತ್ವಕ್ಕೆ ಪ್ರಚೋದನೆ, ಧರ್ಮವನ್ನು ಅಪಮಾನಿಸುವುದು ಹಾಗೂ ಕೋಮುಭಾವನೆ ಕೆರಳಿಸುವುದು ಹಾಗೂ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸ ಬೇಕೆಂದು ಸಯ್ಯದ್ ದೂರಿನಲ್ಲಿ ಆಗ್ರಹಿಸಿದ್ದಾರೆ. ಸಯ್ಯದ್ ನ್ಯಾಯಾಲಯಕ್ಕೆ ಒದಗಿಸಿದ ಸಾಕ್ಷ್ಯ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಕೇವಲ ಕಂಗನಾ ಮಾತ್ರವಲ್ಲದೇ ಅವರ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.ಇತ್ತೀಚಿಗಷ್ಟೇ ಕಂಗನಾ ರೈತ ಮಸೂದೆ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ರೈತ ಮಸೂದೆ ವಿರೋಧಿಸುವವರು ದೇಶದ್ರೋಹಿಗಳು ಎಂಬರ್ಥದಲ್ಲಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ತುಮಕೂರು ಮೂಲದ ವಕೀಲರೊಬ್ಬರು ಕಂಗನಾ ರೈತರನ್ನು ಅಪಮಾನಿಸಿದ್ದಾರೆ ಎಂದು ನ್ಯಾಯಾಲಯದ‌ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿತ್ತು. ಅದರ ಅನ್ವಯ ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ಕಂಗನಾ ವಿರುದ್ಧ ಎಫ್ ಆಯ್ ಆರ್ ದಾಖಲಾಗಿದೆ. ಕೆಲದಿನಗಳ ಹಿಂದೆ ಕಂಗನಾ ಬಾಲಿವುಡ್ ೮ ಬಗೆಯ ಟೆರರಿಸಂನಿಂದ ಮುಕ್ತವಾಗಬೇಕು ಎಂದು ಆಗ್ರಹಿಸಿದ್ದರು.ಒಟ್ಟಿನಲ್ಲಿ ಮತ್ತೆ ಮತ್ತೆ ಕಂಗನಾ ವಿರುದ್ಧ ಪ್ರಕರಣಗಳು ದಾಖಲಾಗುತ್ತಿದ್ದು, ಆಕೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ಇದು ಎಂದು ಆಕೆಯ ಅಭಿಮಾನಿಗಳು ಆರೋಪಿಸಿದ್ದಾರೆ.

Comments are closed.