Pan India: ದುನಿಯಾ ಸೂರಿ : ಚರಿತ್ರೆ ತಿಳಿದಿಲ್ಲ ಅಂದರೆ ಪಾನ್ ಇಂಡಿಯಾ ಅನ್ನೋ ಪದ ಹುಟ್ಟುತ್ತದೆ!

ಪಾನ್ ಇಂಡಿಯಾ (Pan India) ಅನ್ನೋದು ಈಗ ಎಲ್ಲೆಡೆ ಕೇಳಿಬರುತ್ತಿರುವ ಪದ. ಪಾನ್ ಇಂಡಿಯಾ ಸಿನಿಮಾ ಅಂದರೆ ಭಾರತದ ಅಷ್ಟೂ ರಾಜ್ಯಗಳ, ಎಲ್ಲಾ ಭಾಷಿಕರು ನೋಡುವಂಥ ಸಿನಿಮಾ. ಎಲ್ಲರೂ ಮೆಚ್ಚುವಂಥ ಸಿನಿಮಾ. ಉದಾಹರಣೆಗೆ ಆರ್ ಆರ್ ಆರ್ , ಕೆಜಿಎಫ್-2, ರಾಧೇಶ್ಯಾಮ್ ಇತ್ಯಾದಿ. ಈ ಪಾನ್ ಇಂಡಿಯಾ ಸದ್ದು ಇತ್ತೀಚೆಗಷ್ಟೇ ಆಗಿರುವುದು. ತೆಲುಗಿನಲ್ಲಿ ಅಲ್ಲು ಅರ್ಜುನ್, ಕನ್ನಡದಲ್ಲಿ ಯಶ್, ಸುದೀಪ್, ತಮಿಳಲ್ಲಿ ವಿಜಯ್ ಹೀಗೆ ಒಂದಷ್ಟು ಹೆಸರುಗಳು ಕಾಣುತ್ತವೆ.

ಹಾಗಂತ ಹಿಂದೆ ಎಂದೂ ಇಂಥ ಸಿನಿಮಾಗಳು ಬಂದಿಲ್ಲವೇ. ಬಾಲಿವುಡ್ ನ ಬಹುತೇಕ ಸಿನಿಮಾಗಳು ಕರ್ನಾಟಕದಲ್ಲೂ, ತಮಿಳುನಾಡಲ್ಲೂ ಪ್ರದರ್ಶನಗಳು ಆಗಿಲ್ಲವೇ. ಅವೆಲ್ಲ ಪಾನ್ ಇಂಡಿಯಾ ಸಿನಿಮಾಗಳು ಅಲ್ಲವೇ…

ನಿರ್ದೇಶಕ ದುನಿಯ ಸೂರಿ ಈ ಪ್ರಶೆಗೆ ಉತ್ತರಿಸಿದ್ದಾರೆ. ಅವರ ಪ್ರಕಾರ, ಪಾನ್ ಇಂಡಿಯಾ ಅನ್ನೋದು ಈಗಿಟ್ಟ ಹೆಸರು. ಈಗಾಗಲೇ ನಮ್ಮಲ್ಲಿ, ಅದರಲ್ಲೂ ಕನ್ನಡದಲ್ಲಿ ಇಂಥ ಪ್ರಯೋಗಶೀಲ ಸಿನಿಮಾಗಳು ಬಂದು ಹೋಗೋಗಿವೆಯಂತೆ. ಅವರ ಪ್ರಕಾರ ಕನ್ನಡದ ಶಾಂತಿ-ಕ್ರಾಂತಿ ಪಾನ್ ಇಂಡಿಯಾ ಸಿನಿಮಾ. ‘ಪುಟ್ಟಣ್ಣ, ರವಿಚಂದ್ರನ್, ತಮಿಳಲ್ಲಿ ಮಣಿರತ್ನಂ, ತೆಲುಗಿನಲ್ಲಿ ರಾಮಗೋಪಾಲ್ ವರ್ಮಾ ಮುಂತಾದವರು ಈಗಾಗಲೇ ಇಂಥ ಪ್ರಯೋಗ ಮಾಡಿದ್ದಾರೆ. ಆಗ ಪಾನ್ ಇಂಡಿಯಾ ಅಂತೇನು ಕರೆಯುತ್ತಿರಲಿಲ್ಲ.ಈಗ ಅದಕ್ಕೊಂದು ಲೇಬಲ್ ಅಂಟಿಸಿದ್ದಾರೆ ಅಷ್ಟೇ’ ಎಂದು ಸೂರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಚರಿತ್ರೆ ತಿಳಿದಿಲ್ಲ ಅಂದರೆ ಇಂಥ ಪದಗಳು ಹುಟ್ಟುತ್ತವೆ. ಒಂದು ಕ್ಷೇತ್ರದಲ್ಲಿ ಐದು ವರ್ಷ ಕೆಲಸ ಮಾಡಿದರೆ ಅದರ ಇತಿಹಾಸ ತಿಳಿಯುತ್ತಾ ಹೋಗುತ್ತದೆ. ಆಗ ನಿಮಗೆ ಪಾನ್ ಇಂಡಿಯಾ ಪ್ರಯೋಗಗಳು ಯಾವಾಗ ಆಗಿವೆ ಅನ್ನೋ ಜ್ಞಾನ ಮೂಡುತ್ತದೆ. ಈಗ ಹೆಸರಿಟ್ಟುಕೊಂಡು ಮಾಡ್ತಾ ಇದ್ದೀವಿ. ಆಗ ಹೆಸರಿಲ್ಲದೆ ಮಾಡಿದ್ದರು. ಶಾಂತ್ರಿಕ್ರಾಂತಿ ಬಿಡುಗಡೆಯಾದಾಗ ಭಾರತೀಯ ಚಿತ್ರರಂಗ ಅದನ್ನು ಕುತೂಹಲದಿಂದ ನೋಡಿತ್ತು. ಅದೂಕೂಡ ಪಾನ್ ಇಂಡಿಯಾ ಸಿನಿಮಾನೇ’ ಎಂದು ವಿವರಣೆ ಕೊಟ್ಟರು ಸೂರಿ.

ಇದನ್ನೂ ಓದಿ : KGF Chapter 2 : ಅಮುಲ್​​ ಕಾರ್ಟೂನ್​​ ರೂಪದಲ್ಲಿ ಮೂಡಿಬಂತು ರಾಕಿ ಭಾಯ್​ ಚಿತ್ರ

ಸೂರಿ, ಪಾನ್ ಇಂಡಿಯಾಕ್ಕೆ ಬಹಳ ಆಸಕ್ತಿದಾಯಕವಾದ ಉದಾಹರಣೆ ನೀಡಿದ್ದಾರೆ. ‘ನನ್ನ ಹತ್ತಿರ ಆಂಧ್ರದವರು, ಕೇರಳದವರು ಬಂದರು ಅಂಥ ಇಟ್ಟುಕೊಳ್ಳಿ. ಎಲ್ಲರೂ ಸೇರಿ ಅಡುಗೆ ಮಾಡಬೇಕು. ನಾನು ಆಗ ಕೇಳೋದು ಒಂದೇ. ವೆಜ್ಜಾ, ನಾನ್ ವೆಜ್ಜಾ ಅಂಥ. ಏಕೆಂದರೆ, ಎಲ್ಲಾ ಊರಿನವರನ್ನೂ ಮೆಚ್ಚಿಸುವ ಅಡುಗೆ ಮಾಡ್ತೀನಿ ಅನ್ನೋಕೆ ಆಗೋಲ್ಲ. ಸಿನಿಮಾದಲ್ಲಿ ವಿಷಯಕ್ಕೆ ತಕ್ಕಂತೆ ಸಿನಿಮಾ ಮಾಡಬೇಕು. ಅದು ಒಂದು ಸಮುದಾಯಕ್ಕೋ, ಮನುಷ್ಯಕುಲಕ್ಕೋ ಅನ್ನೋದನ್ನು ತೀರ್ಮಾನ ಮಾಡಬೇಕು’ ಎಂದು ಸೂರಿ ಹೇಳಿದರು.

‘ಕನ್ನಡದಲ್ಲೂ ಅನೇಕ ಒಳ್ಳೆ ಕೆಲಸಗಳು, ಪ್ರಯೋಗಗಳು ಆಗಿವೆ. ನಮ್ಮ ಹಿಂದಿನವರು ಕನ್ನಡ ಸಿನಿಮಾ ರಂಗವನ್ನು ಕಟ್ಟಿಕೊಟ್ಟಿದ್ದರು. ಒಂದಷ್ಟು ಕಾಲ ಹಾಳು ಮಾಡಿಕೊಂಡೆವು. ಮತ್ತೆ ಕಟ್ಟುವ ಕೆಲಸ ಆಗಬೇಕಿದೆ. ಕನ್ನಡದಲ್ಲಿ ಅದ್ಬುತ ಪ್ರಯೋಗಗಳು ಆಗೋಗಿವೆ. ಪುಟ್ಟಣ್ಣ ಅವರು ಟಚ್ ಮಾಡಿರುವ ವಿಷಯಗಳನ್ನು ನಾವು ಮುಟ್ಟಿಲ್ಲ. ನಮಗೆ ಯಾಕೆ ಆಗೋಲ್ಲ. ಈ ಪ್ರಶ್ನೆ ಮಾಡ್ಕೋತಾ ಹೋದರೆ ನಾವು ಶುದ್ಧ ಆಗ್ತಾ ಹೋಗ್ತೀವಿ. ಅಂಥ ಪ್ರಯೋಗ ಮಾಡೋಕೆ ನಾವು ಥರೋ ಆಗಬೇಕು’ ಎಂದು ಸೂರಿ ಕನ್ನಡದ ಪಾನ್ ಇಂಡಿಯಾ ಸಿನಿಮಾಗಳ ವಿಶ್ಲೇಷಣೆ ಮಾಡಿದರು.

ಇದನ್ನೂ ಓದಿ : Kajal Aggarwal : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್​ ಅರ್ಗವಾಲ್​​

(Pan India is the only word but That type of film already is in our history)

Comments are closed.